ಚನ್ನಪಟ್ಟಣ: ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಎಚ್ ಡಿ ದೇವೇಗೌಡರ ಕುಟುಂಬಸ್ಥರು ಒಂದು ಗುಂಟೆ ಜಮೀನು ದಾನ ಮಾಡಿದ್ದಾರಾ ನಾವು ಶಾಲೆಗೆ 25 ಎಕರೆ ದಾನ ಮಾಡಿದ್ದೆವು ಎಂದಿದ್ದಡಿಕೆ ಶಿವಕುಮಾರ್ ಗೆ ಇಂದು ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
25 ಎಕರೆ ದಾನ ಮಾಡಲು ಅವರೇನು ಮಹಾರಾಜರ ವಂಶದವರೇ ಎಂದ ಕುಮಾರಸ್ವಾಮಿ, ದಾನ ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ. ಸುಳ್ಳು ಹೇಳುವುದಕ್ಕೂ ಇತಿಮಿತಿ ಇರಬೇಕು. ನಾನು ಇವರ ರೀತಿ ಅದು ಮಾಢಿದ್ದೇವೆ, ಇದು ಮಾಡಿದ್ದೇವೆ ಎಂದು ಬೋರ್ಡ್ ಹಾಕಿಕೊಂಡಿಲ್ಲ ಎಂದಿದ್ದಾರೆ.
ನಾನು ಸಿಎಂ ಆಗುವುದಕ್ಕೆ ಮೊದಲು ರಾಜ್ಯದಲ್ಲಿ ಎಷ್ಟು ಶಾಲಾ, ಕಾಲೇಜುಗಳಿದ್ದವು, ನಾನು ಸಿಎಂ ಆದ ಮೇಲೆ ಎಷ್ಟು ಶಾಲಾ ಕಾಲೇಜುಗಳು ಆಗಿವೆ ಎಂಬುದನ್ನು ಲೆಕ್ಕ ತೆಗೆದು ನೋಡಬಹುದು. ಕನಕಪುರದ ಶಾಸನಕರಾಗಿ, ಉಪಮುಖ್ಯಮಂತ್ರಿಯಾಗಿ ಈ ವ್ಯಕ್ತಿಯ ಕೊಡುಗೆ ಏನೆಂದು ದಾಖಲೆ ತೆಗೆದು ನೋಡಲಿ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
ಸರ್ಕಾರ ಕಿತ್ತೊಗೆಯುವುದು ಎಂದರೆ ಕಡಲೆಕಾಯಿ ಗಿಡ ಕಿತ್ತ ಹಾಗಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು ನಾವು ಹೇಳಿದ್ದು ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದು ಕಡಲೆಕಾಯಿ ಗಿಡ ಎಂದಿಲ್ಲ ಎಂದರು. ಸರ್ಕಾರವನ್ನು ಕಿತ್ತೊಗೆಯಬೇಕು ಎನ್ನುವುದು ಜನರ ಭಾವನೆ. ಅದನ್ನೇ ದೇವೇಗೌಡರು ಹೇಳಿದ್ದಾರೆ ಎಂದಿದ್ದಾರೆ.