ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಮತಯಾಚನೆ ಮಾಡಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರ ಪರವಾಗಿ ಎಚ್ ಡಿ ದೇವೇಗೌಡರು ಪ್ರಚಾರ ನಡೆಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಅನ್ಯಾಯಗಳ ಬಗ್ಗೆ ದೇವೇಗೌಡರು ವಾಗ್ದಾಳಿ ನಡೆಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ದೇವೇಗೌಡರು ಹೇಳುತ್ತಾರೆ ಕಟುಕರಿಗೆ ಕಣ್ಣೀರು ಬರಲ್ಲ ಅಂತ. ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನೂರಾರು ಹೆಣ್ಣು ಮಕ್ಕಳು ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೋಗಿ ನಿಮ್ಮ ಕುಟುಂಬದವರು ಯಾರಾದರೂ ಕಣ್ಣೀರು ಹಾಕಿದ್ರಾ? ಅನ್ಯಾಯ ಮಾಡಿದ್ದು ನಿಮ್ಮ ಮೊಮ್ಮಗ ಅಲ್ವಾ? ಆ ಹೆಣ್ಣು ಮಕ್ಕಳ ಕಷ್ಟ ಕೇಳಬೇಕಾಗಿದ್ದು ನಿಮ್ಮ ಕರ್ತವ್ಯ ಅಲ್ಲವೇ? ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ದೇವೇಗೌಡರ ಮೊಮ್ಮಗ, ರೇಪ್ ಕೇಸ್ ನಲ್ಲಿ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಉಲ್ಲೇಖಿಸಿ ವ್ಯಂಗ್ಯ ಮಾಡಿದ್ದಾರೆ. ಇತ್ತೀಚೆಗೆ ನಿಖಿಲ್ ಕುಮಾರಸ್ವಾಮಿ ಮತ್ತು ಎಚ್ ಡಿ ಕುಮಾರಸ್ವಾಮಿ ಮತದಾರರ ಮುಂದೆ ಕಣ್ಣೀರು ಹಾಕಿದ ಪ್ರಸಂಗವನ್ನೇ ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಲೇ ಇದ್ದಾರೆ.