Publish Date: Sun, 07 Jul 2019 (10:43 IST)
Updated Date: Sun, 07 Jul 2019 (10:45 IST)
ಬೆಂಗಳೂರು : ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಮಧ್ಯಪ್ರವೇಶಸಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ರಾಜೀನಾಮೆ ವಿಚಾರ ನನಗೆ ಸಂಬಂಧವಿಲ್ಲದ ವಿಷಯ. ಅದು ಸ್ಪೀಕರ್ ಮತ್ತು ರಾಜೀನಾಮೆ ನೀಡಿದ ಶಾಸಕರಿಗೆ ಸಂಬಂಧಿಸಿದ ವಿಚಾರ. ಮುಂಬೈನಲ್ಲಿ ನಮ್ಮ ಪಕ್ಷದ ನಾಯಕರು ಯಾರೂ ಅತೃಪ್ತ ಶಾಸಕರ ಜೊತೆಗೆ ಇಲ್ಲ ಎಂದು ಹೇಳಿದ್ದಾರೆ.
ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ನಿರ್ಧರಿಸುತ್ತಾರೆ. ಸ್ಪೀಕರ್ ರಮೇಶ್ ಕುಮಾರ್ ಮೇಲೆ ನನಗೆ ಬಹಳ ಗೌರವವಿದೆ. ಅವರ ಬಗ್ಗೆ ಯಾವುದೇ ಅನುಮಾನ ಪಡುವಂತಹ ಅಗತ್ಯವಿಲ್ಲ. ಮಂಗಳವಾರ ಸ್ಪೀಕರ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.