Select Your Language

Notifications

webdunia
webdunia
webdunia
webdunia

ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿರುವ ವಿಶ್ವವಿಖ್ಯಾತ ಹಂಪಿ: ಸಂಕಷ್ಟದಲ್ಲಿ ಗೈಡ್ಗಳು

ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿರುವ ವಿಶ್ವವಿಖ್ಯಾತ ಹಂಪಿ: ಸಂಕಷ್ಟದಲ್ಲಿ ಗೈಡ್ಗಳು
ವಿಜಯನಗರ , ಗುರುವಾರ, 9 ಸೆಪ್ಟಂಬರ್ 2021 (14:26 IST)
ವಿಜಯನಗರ, ಸೆ 9 : ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರಿದ ರಾಜ್ಯದ ಪ್ರಥಮ ಪ್ರವಾಸಿ ಸ್ಥಳವೆಂದರೆ ಅದು ವಿಶ್ವವಿಖ್ಯಾತ ಹಂಪಿ. ಆದರೆ ಅಲ್ಲಿನ ಇತಿಹಾಸ ಹಾಗೂ ಸ್ಮಾರಕಗಳ ಕಥೆ ಹೇಳುವ ಪ್ರವಾಸಿ ಮಾರ್ಗದರ್ಶಿಗಳ ಸದ್ಯದ ಜೀವನ ಮಾತ್ರ ಸಂಕಷ್ಟದಲ್ಲಿದೆ.

ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಪ್ರವಾಸಿಗರಿಲ್ಲದೆ, ಸರಿಯಾದ ದುಡಿಮೆಯೂ ಇಲ್ಲದೆ, ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಮಾರ್ಗದರ್ಶನ ಮಾಡಲು ದಿನವೆಲ್ಲಾ ಕಾದರೂ ಪ್ರವಾಸಿಗರು ಹಂಪಿಯತ್ತ ಮುಖ ಮಾಡುತ್ತಿಲ್ಲ. ಇದರಿಂದಾಗಿ ಪ್ರವಾಸಿ ಗೈಡ್ಗಳು ನಮ್ಮ ಕಷ್ಟ ಯಾರಿಗೆ ಹೇಳೋಣ ಎನ್ನುತ್ತಿದ್ದಾರೆ.
ಹಂಪಿ ಎಂದಾಕ್ಷಣ ನಮ್ಮ ಕಣ್ಮುಂದೆ ಥಟ್ಟನೆ ಬರುವುದು ವಿಜಯನಗರ ಸಾಮ್ರಾಜ್ಯದ ಗತವೈಭವದ ದಿನಗಳು. ಮುತ್ತು- ರತ್ನಗಳನ್ನು ಬಳ್ಳದಿಂದ ಅಳೆಯುತ್ತಿದ್ದ ವಿಶಜಯನಗರ ಸಾಮ್ರಾಜ್ಯವು ಶ್ರೀಮಂತವಾಗಿತ್ತು. ಇಂದಿನ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಆರಂಭವಾಗಿದ್ದೇ ಹಂಪಿಯಲ್ಲಿ. ಇದೊಂದು ಬಯಲು ವಸ್ತುಸಂಗ್ರಹಾಲಯ. ಆದರೆ ಇಂತಹ ಹಂಪಿಯ ಗತವೈಭವವನ್ನು ಸಾರಿ ಹೇಳುವ ಇಲ್ಲಿನ ಪ್ರವಾಸಿ ಮಾರ್ಗದರ್ಶಿಗಳ ಪಾಡು ಈಗ ಹೇಳತೀರದಾಗಿದೆ.
ಕೊರೊನಾ ಭೀತಿಯಿಂದಾಗಿ ಪ್ರವಾಸಿಗರು ಹಂಪಿಯತ್ತ ಧಾವಿಸುತ್ತಿಲ್ಲ. ದಿನವೆಲ್ಲಾ ಕಾದರೂ ಪ್ರವಾಸಿಗರು ಎಲ್ಲರಿಗೂ ಸಿಗದೆ ಖಾಲಿ ದಿನ ದೂಡುವುದಾಗಿದೆ. ಇನ್ನು ಕೆಲವರಿಗೆ ಸಿಕ್ಕರೂ ಅಪೇಕ್ಷೆ ಮಾಡಿದಷ್ಟು ದುಡಿಮೆಯಿಲ್ಲದೇ ಮನೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ದಿನವೊಂದಕ್ಕೆ ಸಾವಿರಾರು ರೂಪಾಯಿ ದುಡಿಯಿತ್ತಿದ್ದ ಗೈಡ್ಗಳೀಗ ನೂರು ರೂಪಾಯಿ ಗಳಿಸಲೂ ಸಹ ಪ್ರಯಾಸ ಪಡುವಂತಾಗಿದೆ.
ಇನ್ನು ಈಗಷ್ಟೆ ಪದವಿ ಮುಗಿಸಿದ ಅದೆಷ್ಟೋ ವಿದ್ಯಾವಂತರಿಗೆ ಪ್ರವಾಸಿ ಗೈಡ್ ಕೆಲಸ ಆಸರೆಯಾಗಿತ್ತು. ಆದರೀಗ ಅದರಲ್ಲಿಯೂ ಸಹ ಹಿನ್ನಡೆಯಾಗಿ ಮುಂದೇನು ಮಾಡುವುದು ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ.
ಇನ್ನು ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ 5 ಸಾವಿರ ರೂ.ಗಳ ಸಹಾಯಧನವನ್ನು ನೀಡಿದೆ. ಆದರೆ ಇದು ಯಾವುದಕ್ಕೂ ಸಾಲುತ್ತಿಲ್ಲ ಎನ್ನುವುದು ಪ್ರವಾಸಿ ಮಾರ್ಗದರ್ಶಿಗಳ ಅಳಲು. ಸರ್ಕಾರಕ್ಕಿಂತ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿಯವರು ಕಳೆದ ಬಾರಿ ಹಾಗೂ ಈ ಬಾರಿ ಪ್ರತಿಯೊಬ್ಬ ಪ್ರವಾಸಿ ಮಾರ್ಗದರ್ಶಿಗೂ ತಲಾ 10 ಸಾವಿರ ರೂ. ಸಹಾಯ ಮಾಡಿದ್ದಾರೆ. ಸರ್ಕಾರ ಇತ್ತ ಗಮನ ನೀಡಿ ನಮ್ಮ ಸಹಾಯಕ್ಕೆ ಬರಬೇಕು ಎನ್ನುವುದು ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಗೈಡ್ಗಳ ಅಳಲು.
ಎರಡು ವರ್ಷದಿಂದ ಪ್ರಪಂಚವನ್ನೇ ಆವರಿಸಿರುವ ಕೊರೊನಾ ಸೋಂಕು ಪ್ರವಾಸಿ ಮಾರ್ಗದರ್ಶಿಗಳ ಬಾಳಿನಲ್ಲೂ ಆಟವಾಡುತ್ತಿದೆ. ಹಂಪಿ ನೋಡಲು ಬರುವ ಪ್ರವಾಸಿಗರ ಸಂಖ್ಯೆಯನ್ನೇ ಇಳಿಮುಖವಾಗಿಸಿದೆ. ಇನ್ನು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪ್ರವಾಸೋದ್ಯಮ ಸಚಿವರಾಗಿದ್ದ ಕಾಲದಲ್ಲಿ ಪ್ರತಿ ಮಾರ್ಗದರ್ಶಿಗಳಿಗೂ ತಿಂಗಳಿಗೆ 3 ಸಾವಿರ ರೂಪಾಯಿಗಳ ಗೌರವ ಧನಕ್ಕೆ ಶಿಫಾರಸ್ಸು ಮಾಡಿ, ಸರ್ಕಾರಿ ಆದೇಶದವರೆಗೂ ಕೊಂಡೊಯ್ದಿದ್ದರು.
ಆದರೆ ನಂತರ ಅಸ್ತಿತ್ವಕ್ಕೆ ಬಂದ ಯಾವೊಂದು ಸರ್ಕಾರವೂ ಇತ್ತ ಗಮನ ನೀಡಿಲ್ಲ ಎನ್ನುವುದು ಮಾರ್ಗದರ್ಶಿಗಳ ಅಳಲು. ಈ ವಿಷಯದ ಕುರಿತು ಈಗಲಾದರೂ ಗಮನ ನೀಡಿ, ಆದಶವನ್ನು ಜಾರಿ ಮಾಡಿದರೆ, ಪ್ರವಾಸಿ ಮಾರ್ಗದರ್ಶಿಗಳಿಗೆ ಆರ್ಥಿಕವಾಗಿ ಕೊಂಚವಾದರೂ ಸಹಕಾರವಾಗುತ್ತದೆ ಎನ್ನುವುದು ಎಲ್ಲ ಗೈಡ್ಗಳ ಮನವಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ಸಮೀಪ ಅಪಘಾತ: ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಾವು