Select Your Language

Notifications

webdunia
webdunia
webdunia
webdunia

ಪ್ರವಾಸೋದ್ಯಮ ಆರಂಭಕ್ಕೆ ಪರ-ವಿರೋಧ ಚರ್ಚೆ

ಪ್ರವಾಸೋದ್ಯಮ ಆರಂಭಕ್ಕೆ ಪರ-ವಿರೋಧ ಚರ್ಚೆ
ಕೊಡಗು , ಭಾನುವಾರ, 11 ಜುಲೈ 2021 (09:44 IST)
ಕೊಡಗು: ಕೊಡಗು ಜಿಲ್ಲೆ ಪ್ರವಾಸಿ ತಾಣಗಳ ತವರೂರು. ಪ್ರವಾಸೋದ್ಯಮವನ್ನೇ ನಂಬಿ ಸಾವಿರಾರು ವ್ಯಾಪಾರಿಗಳು ಉದ್ಯಮ ಅಭಿವೃದ್ಧಿಗೆ ಕಾರಣವಾಗಿದ್ದರೆ, ಸಾವಿರಾರು ಕುಟುಂಬಗಳು ಅದನ್ನೇ ನಂಬಿ ಜೀವನ ಕಟ್ಟಿಕೊಂಡಿವೆ. ಹೀಗಾಗಿ ಕೋವಿಡ್ನಿಂದಾಗಿ ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಪ್ರವಾಸೋದ್ಯಮದ ಆರಂಭಕ್ಕೆ ಜಿಲ್ಲಾಡಳಿತ ಮತ್ತೆ ಅವಕಾಶ ನೀಡಿದೆ.

ಆದರೆ ಕೋವಿಡ್ ಸೋಂಕು ಕೊಡಗು ಜಿಲ್ಲೆಯಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಒಂದೆರಡು ದಿನ ಕೊವಿಡ್ ಪಾಸಿಟಿವಿಟಿ ರೇಟ್ 5 ಕ್ಕಿಂತ ಕಡಿಮೆ ಬಂದರೆ ಮಾರನೆ ದಿನ ಅದು 5 ಕ್ಕಿಂತ ಜಾಸ್ತಿ ಆಗಿಬಿಡುತ್ತದೆ. ಇದು ಜಿಲ್ಲೆಯ ಜನರ ಆತಂಕಕ್ಕೂ ಕಾರಣವಾಗಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೂ ಪ್ರವಾಸೋದ್ಯಮ ಪುನರ್ ಆರಂಭಿಸಿರುವುದಕ್ಕೆ ಕೊಡಗು ರಕ್ಷಣಾ ವೇದಿಕೆ ಮತ್ತು ಅಖಿಲ ಕೊಡವ ಯೂತ್ ವಿಂಗ್ ಸೇರಿದಂತೆ ವಿವಿಧ ಪ್ರಮುಖ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
webdunia


ಪ್ರವಾಸಿ ತಾಣಗಳು ಮುಕ್ತವಾಯಿತೆಂದರೆ ಹೊರ ಜಿಲ್ಲೆ, ರಾಜ್ಯಗಳಿಂದ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರು ಯಾವುದೇ ಕಾರಣಕ್ಕೂ ಕೋವಿಡ್ ನಿಯಮಗಳನ್ನು ಪಾಲಿಸದೆ ಜಿಲ್ಲೆಯಲ್ಲಿ ಮತ್ತಷ್ಟು ಸೋಂಕು ಹರಡಿಬಿಡುವ ಆತಂಕವಿದೆ ಎನ್ನೋದು ವಿವಿಧ ಸಂಘಟನೆಗಳು ವಿರೋಧ ಮಾಡುವುದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಅವುಗಳಲ್ಲಿ ಕೇವಲ 800 ಹೋಂಸ್ಟೇಗಳು ಮಾತ್ರವೇ ಅಧಿಕೃತವಾಗಿದ್ದು, ಅವುಗಳು ಕೋವಿಡ್ ನಿಯಮ ಪಾಲಿಸಿದರೂ ಉಳಿದ ಅನಧಿಕೃತ ಹೋಂಸ್ಟೇಗಳು ನಿಯಮ ಪಾಲಿಸುವುದೇ ಇಲ್ಲ. ಜೊತೆಗೆ ಪ್ರವಾಸಿಗರು ಎಲ್ಲೆಂದರಲ್ಲಿ ಇದರಿಂದಾಗಿ ಬೇಕಾಬಿಟ್ಟಿ ಓಡಾಡುವುದರಿಂದ ಸೋಂಕು ಬಾರಿ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮಳೆಗಾಲ ಮುಗಿಯುವವರೆಗೆ ಪ್ರವಾಸೋದ್ಯಮ ಆರಂಭಿಸೋದು ಬೇಡ ಎನ್ನೋದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರ ಒತ್ತಾಯ.
ಆದರೆ ಕಳೆದ ಮೂರು ವರ್ಷಗಳಿಂದ ಪ್ರವಾಹ ಭೂಕುಸಿತದಿಂದ ಸಂಪೂರ್ಣ ನಲುಗಿ ಹೋಗಿದ್ದ ಪ್ರವಾಸೋದ್ಯಮ ಮತ್ತೆ ಒಂದು ವರ್ಷದಿಂದ ಕೋವಿಡ್ ಲಾಕ್ ಡೌನ್ ನಿಂದಾಗಿ ಸಂಪೂರ್ಣ ತತ್ತರಿಸಿ ಹೋಗಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಹೋಂಸ್ಟೇ ರೆಸಾರ್ಟ್ ಅಥವಾ ಮತ್ಯಾವುದೋ ವ್ಯಾಪಾರೋದ್ಯಮ ಆರಂಭಿಸಿದ್ದ ನಾವು ಮಾಡಿದ್ದ ಸಾಲವನ್ನು ತೀರಿಸಲಾಗದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಪ್ರವಾಸೋದ್ಯಮವನ್ನೇ ನಂಬಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದ
ಸಿಬ್ಬಂದಿ ಕೂಲಿ ಇಲ್ಲದೆ ಶೋಚನೀಯ ಸ್ಥಿತಿ ತಲುಪಿದ್ದಾರೆ. ಅಷ್ಟಕ್ಕೂ ಜಿಲ್ಲೆಯ ಹೋಂಸ್ಟೇ ಮತ್ತು ರೆಸಾರ್ಟ್ ಗಳಿಗೆ ಬರುವ ಪ್ರವಾಸಿಗರಿಗೆ ವ್ಯಾಕ್ಸಿನ್ ಆಗಿರೋದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಜೊತೆಗೆ 72 ಗಂಟೆಯೊಳಗಾಗಿ ಆರ್ಟಿಪಿಸಿಆರ್ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿವೆ. ಹೀಗಿರುವಾಗ ಪ್ರವಾಸೋದ್ಯಮದಿಂದ ಕೋವಿಡ್ ಸೋಂಕು ಹರಡಲು ಹೇಗೆ ಸಾಧ್ಯ ಎನ್ನೋದು ವ್ಯಾಪಾರೋದ್ಯಮಿ ತಮ್ಮು ಪೂವಯ್ಯ ಅವರ ಪ್ರಶ್ನೆ.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ವಾರ್ಷಿಕ ಹಬ್ಬ ಆಚರಣೆಗಳಿಗೆ ಭಾರೀ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಬಂದ ಜನರು ಭಾಗವಹಿಸಿದ್ದೇ ಕೋವಿಡ್ ಸೋಂಕು ಮಿತಿಮೀರಲು ಕಾರಣ. ಜೊತೆಗೆ ಕೋವಿಡ್ ನಿಯಮಗಳನ್ನು ಮೀರಿ ಸಾಕಷ್ಟು ಮದುವೆಗಳು ನಡೆದವು. ಇವುಗಳಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಂಟ್ರೋಲ್ ತಪ್ಪಿತು. ಇವುಗಳ ಬಗ್ಗೆ ಯಾಕೆ ಯಾವ ಸಂಘಟನೆಗಳು ಮಾತನಾಡುವುದಿಲ್ಲ ಎನ್ನೋದು ವ್ಯಾಪಾರೋದ್ಯಮಿಗಳ ಪ್ರಶ್ನೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊವಿಡ್ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದಿದ್ದರೂ ಪ್ರವಾಸೋದ್ಯಮ ಆರಂಭಿಸಿರುವುದಕ್ಕೆ ಪರ ವಿರೋಧಗಳ ಚರ್ಚೆ ಆರಂಭವಾಗಿದ್ದು ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕು

 

 

 

 

 

 

 

 

 

 

 

Share this Story:

Follow Webdunia kannada

ಮುಂದಿನ ಸುದ್ದಿ

ಆಟವಾಡಲು ಹೋಗಿದ್ದಕ್ಕೆ ಮಗಳ ಕೈ ಸುಟ್ಟ ತಾಯಿ