Publish Date: Thu, 19 Aug 2021 (12:56 IST)
Updated Date: Thu, 19 Aug 2021 (12:59 IST)
ಬೆಂಗಳೂರು,ಆ.19: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬ ಸಮೇತವಾಗಿ ನಾಳೆಯಿಂದ ವಿಶ್ವವಿಖ್ಯಾತ ಹಂಪಿ ವೀಕ್ಷಣೆ ಮಾಡಲಿದ್ದಾರೆ. ನಾಳೆ ಮತ್ತು ಆ.21ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತಿರುವ ವೆಂಕಯ್ಯ ನಾಯ್ಡು ಅವರ ಜೊತೆಯಲ್ಲಿ ಅವರ ಧರ್ಮ ಪತ್ನಿ ಎಂ ಉಷಾ ಸಹ ಆಗಮಿಸುತ್ತಿದ್ದಾರೆ.
ಸುಗಮ ಪ್ರವಾಸಕ್ಕಾಗಿ ಹಂಪಿಯಲ್ಲಿ ಹಲವು ರೀತಿಯ ಸಿದ್ಧತೆ ನಡೆಯುತ್ತಿದ್ದು, ನಾಳೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಯ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5.20ಕ್ಕೆ ಉಪರಾಷ್ಟ್ರಪತಿಗಳು ಆಗಮಿಸುವರು. ನಂತರ ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಲಿದ್ದಾರೆ.
ಬಳಿಕ ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್ನಲ್ಲಿ ತಂಗಲಿದ್ದಾರೆ. ಆ.21ರಂದು ಬೆಳಿಗ್ಗೆಯಿಂದ ಸಂಜೆವರಗೆ ಹಂಪಿಯ ಶ್ರೀವಿರೂಪಾಕ್ಷ ದೇವಸ್ಥಾನ, ಸಾಸುವೆಕಾಳು, ಕಡಲೇಕಾಳು ಗಣೇಶ, ಕೃಷ್ಣ ದೇವಸ್ಥಾನ, ಕಮಲಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇವಸ್ಥಾನ ಮೊದಲಾದ ಸ್ಮಾರಕಗಳನ್ನು ಉಪರಾಷ್ಟ್ರಪತಿಗಳು ವೀಕ್ಷಿಸಲಿದ್ದಾರೆ.