Select Your Language

Notifications

webdunia
webdunia
webdunia
webdunia

Wing commander assault: ಭಾಷೆ ವಿಚಾರಕ್ಕೆ ಇನ್ನೊಬ್ಬರ ಮೇಲೆ ಹಲ್ಲೆ ನಡೆಸುವ ಸಣ್ಣ ಬುದ್ಧಿ ಕನ್ನಡಿಗರದ್ದಲ್ಲ: ಸಿದ್ದರಾಮಯ್ಯ ಗುಡುಗು

Siddaramaiah

Krishnaveni K

ಬೆಂಗಳೂರು , ಮಂಗಳವಾರ, 22 ಏಪ್ರಿಲ್ 2025 (14:38 IST)
ಬೆಂಗಳೂರು: ಸಿವಿ ರಾಮನ್ ರಸ್ತೆಯಲ್ಲಿ ನಡೆದ ವಿಂಗ್ ಕಮಾಂಡರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಭಾಷೆ ವಿಚಾರಕ್ಕೆ ಇನ್ನೊಬ್ಬರ ಮೇಲೆ ಹಲ್ಲೆ ನಡೆಸುವ ಸಣ್ಣ ಬುದ್ಧಿ ಕನ್ನಡಿಗರದ್ದಲ್ಲ ಎಂದು ಗುಡುಗಿದ್ದಾರೆ.

ಸಿವಿ ರಾಮನ್ ರಸ್ತೆಯಲ್ಲಿ ತಮ್ಮ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ್ದಲ್ಲದೆ, ಕನ್ನಡದಲ್ಲಿ ಮಾತನಾಡು ಎಂದು ಬೆದರಿಸಿದ್ದಾನೆ ಎಂದು ಏರ್ ಫೋರ್ಸ್ ಅಧಿಕಾರಿ ಶೀಲಾದಿತ್ಯ ಬೋಸ್ ಆರೋಪಿಸಿದ್ದರು.

ಆದರೆ ಕೂಲಂಕುಷವಾಗಿ ತನಿಖೆ ನಡೆಸಿದಾಗ ಶೀಲಾದಿತ್ಯ ಸುಳ್ಳು ಕತೆ ಕಟ್ಟಿದ್ದರು ಎಂದು ಬೆಳಕಿಗೆ ಬಂದಿತ್ತು. ಅಸಲಿಗೆ ಯುವಕನ ಮೇಲೆ ಶೀಲಾದಿತ್ಯ ಅವರೇ ಮನಬಂದಂತೆ ಥಳಿಸಿದ್ದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಇದರ ಬೆನ್ನಲ್ಲೇ ಈಗ ಶೀಲಾದಿತ್ಯ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ‘ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ವಾಹನ ಟಚ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗ ವಿಕಾಸ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್, ನಂತರ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃ ಭಾಷೆಯ ಬಗ್ಗೆ ಅಭಿಮಾನ ಹೊಂದಿರುವವರೇ ಹೊರತು ದುರಭಿಮಾನಿಗಳಲ್ಲ. ಭಾಷೆಯ ವಿಚಾರಕ್ಕೆ ವಿನಾಕರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ.

ದೇಶದ ಮೂಲೆ ಮೂಲೆಗಳಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಇದಕ್ಕೆ ಇತಿಹಾಸ ಸಾಕ್ಷಿ.

ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿಬಳಿಯುವ ಕೆಲಸವನ್ನು ಮಾಡಿದ್ದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಘಾಸಿಯಾಗಿದೆ.

ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೆ ಸರ್ಕಾರ ಕರ್ನಾಟಕದಲ್ಲಿದೆ.

ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ‌ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶಗಳಲ್ಲಿ ರಾಷ್ಟ್ರ ಗೌರವಕ್ಕೆ ಧಕ್ಕೆ ತಂದ ರಾಹುಲ್ ಗಾಂಧಿ: ಬಿವೈ ವಿಜಯೇಂದ್ರ