Publish Date: Wed, 25 Apr 2018 (07:03 IST)
Updated Date: Wed, 25 Apr 2018 (07:05 IST)
ಮಂಡ್ಯ: ಮಂಡ್ಯದ ಗಂಡು ಎಂದರೆ ಒಂದೇ ಒಂದು ಹೆಸರು ಬರುವುದು ರೆಬಲ್ ಸ್ಟಾರ್ ಅಂಬರೀಷ್. ಅಷ್ಟರಮಟ್ಟಿಗೆ ಅಲ್ಲಿಯ ಜನರ ಪ್ರೀತಿ ಗಳಿಸಿಕೊಂಡಿದ್ದ ಅಂಬರೀಷ್ ಈ ಬಾರಿ ವಿಧಾನಸಭೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೂ ಸ್ಪರ್ಧಿಸುವುದಿಲ್ಲವೆಂದು ಬಿಟ್ಟರು!
ಮನೆಗೇ ಬಿ ಫಾರಂ ಕಳುಹಿಸಿಕೊಟ್ಟರೂ ಅಂಬರೀಷ್ ಸ್ಪರ್ಧೆಯಿಂದ ಹಿಂದೆ ಸರಿಯಲು ಹಲವು ಕಾರಣಗಳಿವೆ ಎನ್ನಲಾಗಿದೆ. ಮೊದಲನೆಯದಾಗಿ ಮಂಡ್ಯ ಜಿಲ್ಲೆಯಲ್ಲೇ ಅಂಬರೀಷ್ ರನ್ನು ಮೂಲೆಗುಂಪು ಮಾಡುತ್ತಿರುವುದು.
ಅವರನ್ನು ಕೇಳದೆಯೇ ಜಿಲ್ಲಾ ಕಾಂಗ್ರೆಸ್ ನ ನಿರ್ಧಾರಗಳು ನಡೆಯುತ್ತಿರುವುದರಿಂದ ಅಂಬಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅದಲ್ಲದೆ, ಪಕ್ಷದ ಕೆಲವು ಪ್ರಮುಖ ನಾಯಕರೇ ಅಂಬರೀಷ್ ರನ್ನು ಅವಗಣಿಸುತ್ತಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ದೋಸ್ತಿಯಂತಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಅಂಬರೀಷ್ ಅಸಮಾಧಾನಕ್ಕೆ ಮುಲಾಮು ಹಚ್ಚುವ ಕೆಲಸ ಮಾಡಲಿಲ್ಲ. ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಂಬರೀಷ್ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾತನಾಡಿದ್ದರು. ಇದೆಲ್ಲಾ ಅಂಬಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.