ಬೆಂಗಳೂರು : ವಿವಿಧ ಇಲಾಖೆಗಳಲ್ಲಿನ ಬಿ, ಸಿ ಹಾಗೂ ಡಿ ದರ್ಜೆಯ ಅಧಿಕಾರಿ ಮತ್ತು ನೌಕರರ ವರ್ಗಾವಣೆ ಮಾಡಲು ಇಲಾಖಾ ಸಚಿವರಿಗೆ ಕೆಲವು ಷರತ್ತುಗಳೊಂದಿಗೆ ಒಂದು ತಿಂಗಳ ಸೀಮಿತ ಅವಧಿಯ ಅಧಿಕಾರ ನೀಡಿ ರಾಜ್ಯ ಸರ್ಕಾರ ಹೆಚ್ಚುವರಿ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಿದೆ.
ಇದರಡಿ ಒಟ್ಟು ಸಿಬ್ಬಂದಿಯ ಶೇ.6ರಷ್ಟು ಮೀರದಂತೆ ಗ್ರೂಪ್-ಬಿ, ಗ್ರೂಪ್-ಸಿ ಹಾಗೂ ಡಿ ಗ್ರೂಪ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ವರ್ಗಾವಣೆ ಮಾಡಬಹುದು. ಹಾಲಿ ಹುದ್ದೆಯಲ್ಲಿ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಯ ವರ್ಗಾವಣೆ ಮಾತ್ರ ಅನುಮೋದಿಸಬೇಕೆಂದು ಷರತ್ತು ವಿಧಿಸಲಾಗಿದೆ.
ಈ ನಿಯಮ ಒಂದು ತಿಂಗಳವರೆಗೆ ಮಾತ್ರ ಅನ್ವಯವಾಗಲಿದ್ದು ಬಳಿಕ ಮುಂದಿನ ಸಾರ್ವತ್ರಿಕ ವರ್ಗಾವಣೆವರೆಗೆ ಯಾವುದೇ ಅವಧಿ ಪೂರ್ವ ವರ್ಗಾವಣೆ ಮಾಡುವಂತಿಲ್ಲ. ಮುಖ್ಯಮಂತ್ರಿಗಳಿಗೂ ವರ್ಗಾವಣೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ ಎಂದು ಮಾರ್ಗಸೂಚಿ ಯಲ್ಲಿ ಸ್ಪಷ್ಟಪಡಿಸಲಾಗಿದೆ.
ವರ್ಗಾವಣೆ ಮಾರ್ಗಸೂಚಿ ಅನ್ವಯ ಕೆಲವು ವಿಶೇಷ ಪ್ರಕರಣಗಳಲ್ಲಿ ಹಾಗೂ ಸಾರ್ವತ್ರಿಕ ವರ್ಗಾವಣೆ ನಂತರ ಮಾಡುವ ವರ್ಗಾವಣೆಗಳಿಗೆ ಸಿಎಂರಿಂದ ಅನುಮೋದನೆ ಪಡೆವುದು ಕಡ್ಡಾಯವಾಗಿತ್ತು. ಆದರೆ, ಇದೀಗ ಮುಖ್ಯ ಮಂತ್ರಿಗಳ ಅನುಮೋದನೆಗೆ ಸಲ್ಲಿಸಿರುವ ಬಹುತೇಕ ವರ್ಗಾವಣೆಗಳು ನಿಯಮಿತ (ರೆಗ್ಯುಲರ್) ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳು.
ಹೀಗಾಗಿ ಲಭ್ಯವಿರುವ ಖಾಲಿ ಸ್ಥಾನಗಳಿಗೆ ಮಾತ್ರ ತಮ್ಮ ಕನಿಷ್ಠ ಸೇವಾವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಗಳ ವರ್ಗಾವಣೆಗಳನ್ನು ಅನುಮೋದಿಸಲು ಆಯಾ ಇಲಾಖೆ ಸಚಿವರಿಗೆ ಅಧಿ ಕಾರ ನೀಡಲಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.