ನಾನು ಪ್ರಶ್ನೆ ಮಾಡಿದ್ದು ಆರ್ ಎಸ್ ಎಸ್ ಎಂಬ ಸಂಸ್ಥೆಯನ್ನು, ಬಿಜೆಪಿ ನಾಯಕರು ಯಾಕೆ ಉತ್ತರಿಸುತ್ತಿದ್ದಾರೆ? ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್ ಎಸ್ ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಮೂಲ ಯಾವುದು ಎಂದು ಇತ್ತೀಚೆಗೆ ನೀಡಿದ ಹೇಳಿಕೆಗೆ ಬಿಜೆಪಿ ಸಚಿವರು ಅಸಮಾಧಾನ ವ್ಯಕ್ತಪಡಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿಂದೂ ಧರ್ಮದ ರಕ್ಷಣೆಗಾಗಿಯೇ ಅವತಾರ ಎತ್ತಿ ಬಂದಂತೆ ಮಾತನಾಡುತ್ತಿರುವ ಆರ್.ಎಸ್.ಎಸ್ ನಾಯಕರು ಬೆಂಬಲಿಸುತ್ತಿರುವುದು ಮಾತ್ರ ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು. ಯಾಕೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಎಂದರು.
ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೆಂದು ಯಾವ ಆಧಾರದಲ್ಲಿ ಆರ್.ಎಸ್.ಎಸ್ ತೀರ್ಮಾನಿಸಿದೆ? ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲು ಹೊಂದಿರಬೇಕಾದ ಅರ್ಹತೆಗಳೇನು? ಎಂದು ಅವರು ಪ್ರಶ್ನಿಸಿದರು.
ಆರ್.ಎಸ್.ಎಸ್ ಪ್ರತಿಪಾದಿಸುವ ಹಿಂದೂ ಧರ್ಮದಲ್ಲಿ ದಲಿತರು, ಹಿಂದುಳಿದ ಜಾತಿಗಳ ಸ್ಥಾನಮಾನ ಏನು? ಆರ್.ಎಸ್.ಎಸ್ ಯಾಕೆ ಮೀಸಲಾತಿ, ಭೂಸುಧಾರಣೆಯನ್ನು ವಿರೋಧಿಸುತ್ತಾ ಬಂದಿದೆ? ಇದರ ಫಲಾನುಭವಿಗಳು ಹಿಂದುಗಳು ಅಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು
ಆರ್.ಎಸ್.ಎಸ್ ದೃಷ್ಟಿಯಲ್ಲಿ ಹಿಂದೂ ಆಗಲೂ 40% ಕಮಿಷನ್ ಹೊಡೆಯಬೇಕಾ? ಬ್ಲೂ ಫಿಲ್ಮ್ ನೋಡಬೇಕಾ? ಗಣಿ ಲೂಟಿ ಮಾಡಬೇಕಾ? ಚೆಕ್ ನಲ್ಲಿ ದುಡ್ಡು ಪಡೆದು ಜೈಲಿಗೆ ಹೋಗಬೇಕಾ? ರೇಪ್ ಮಾಡಬೇಕಾ? ಏನು ಮಾಡಬೇಕು? ಹೇಳಿಬಿಡಿ. ಹಸಿದ ಹೊಟ್ಟೆಗೆ ಅನ್ನ, ಎಳೆಯ ಮಕ್ಕಳಿಗೆ ಹಾಲು, ರೈತರ ಬೆಳೆಗೆ ನ್ಯಾಯದ ಬೆಲೆ, ಯುವಜನರಿಗೆ ಉದ್ಯೋಗ, ಅವಕಾಶ ವಂಚಿತರಿಗೆ ಸಮಾನ ಅವಕಾಶ, ಜಾತಿ ತಾರತಮ್ಯದಿಂದ ಅನ್ಯಾಯಕ್ಕೀಡಾದವರಿಗೆ ಸಾಮಾಜಿಕ ನ್ಯಾಯ.. ಹಿಂದೂ ಆಗಲು ಇಷ್ಟು ಅರ್ಹತೆ ಸಾಲದೇ? ಎಂದು ಅವರು ಕಿಡಿಕಾರಿದ್ದಾರೆ.
ಹಿಂದೂಗಳೆಲ್ಲ ಒಂದು ಎಂದು ಕಂಠಶೋಷಣೆ ಮಾಡುತ್ತಿರುವ ಆರ್.ಎಸ್.ಎಸ್ ತನ್ನ ಸಂಘಟನೆಯ ಪದಾಧಿಕಾರಗಳನ್ನೆಲ್ಲಾ ಯಾಕೆ ಒಂದು ಜಾತಿಗೆ ಮೀಸಲಿಟ್ಟಿದೆ? ಆರ್.ಎಸ್.ಎಸ್ ನ ಪದಾಧಿಕಾರಿಗಳಲ್ಲಿ ಎಷ್ಟು ಮಂದಿ ದಲಿತರು, ಹಿಂದುಳಿದ ಜಾತಿಯವರಿದ್ದಾರೆ? ಎಂದು ಹೇಳಿದರು.