Select Your Language

Notifications

webdunia
webdunia
webdunia
webdunia

ಗೃಹಲಕ್ಷ್ಮಿ ವಿಚಾರದಲ್ಲಿ ಹೀರೋ ಆದ ಶಾಸಕ ಮಹೇಶ್ ಟೆಂಗಿನಕಾಯಿ: ಅವರಿಗೆ ಅಕ್ರಮ ಗೊತ್ತಾಗಿದ್ದು ಹೇಗೆ

Mahesh Tenginakayi

Krishnaveni K

ಬೆಳಗಾವಿ , ಶುಕ್ರವಾರ, 19 ಡಿಸೆಂಬರ್ 2025 (09:19 IST)
ಬೆಳಗಾವಿ: ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ನಾಯಕರ ಪೈಕಿ ಗಮನ ಸೆಳೆದಿದ್ದು ಶಾಸಕ ಮಹೇಶ್ ಟೆಂಗಿನಕಾಯಿ. ಗೃಹಲಕ್ಷ್ಮಿ ವಿಚಾರದಲ್ಲಿ ಸರ್ಕಾರದ ವಿರುದ್ಧ ದಾಖಲೆ ನೀಡಿ ಹೀರೋ ಆಗಿದ್ದಾರೆ.

ಇಷ್ಟು ದಿನ ಸದನದಲ್ಲಿ ವಿಪಕ್ಷ ಬಿಜೆಪಿ ನಾಯಕರನ್ನು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಏನೇ ಮಾತನಾಡಲು ಹೊರಟರೂ ಕೌಂಟರ್ ಕೊಟ್ಟು ಸುಮ್ಮನಾಗಿಸುತ್ತಿದ್ದರು. ಆದರೆ ಈ ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ ತಪ್ಪಿನಿಂದ ಕೈ ನಾಯಕರು ಸುಮ್ಮನಾಗಬೇಕಾಯಿತು.

ಗೃಹಲಕ್ಷ್ಮಿ ಹಣವನ್ನು ಎಲ್ಲಾ ತಿಂಗಳೂ ಕೊಡಲಾಗಿದೆ ಎಂದಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಡುವೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಹಾಕಿಲ್ಲ ಎಂದು ಮಹೇಶ್ ಟೆಂಗಿನಕಾಯಿ ದಾಖಲೆ ಸಮೇತ ಬಯಲಿಗೆಳೆದರು. ಇದು ರಾಜ್ಯ ಸರ್ಕಾರವನ್ನೇ ಅನುಮಾನದಿಂದ ನೋಡುವಂತಾಯಿತು. ಕೊನೆಗೆ ಅವರು ನೀಡಿದ ದಾಖಲೆಗಳ ಮುಂದೆ ಲಕ್ಷ್ಮೀ ಹೆಬ್ಬಾಳ್ಕರ್ ತಲೆಬಾಗಲೇ ಬೇಕಾಯಿತು.

ಗೃಹಲಕ್ಷ್ಮಿ ಹಣದಲ್ಲಿ ವ್ಯತ್ಯಯವಾಗಿದೆ ಎಂದು ಅವರಿಗೆ ತಮ್ಮ ಮನೆ ಕೆಲಸದವರನ್ನು ವಿಚಾರಿಸಿದಾಗ ತಿಳಿದಿತ್ತಂತೆ. ನಡುವೆ ಎರಡು ತಿಂಗಳ ಹಣ ಬಂದಿಲ್ಲ ಎಂದಾಗ  ಅವರಿಗೆ ಇದರಲ್ಲಿ ಏನೋ ಸಮಸ್ಯೆಯಿದೆ ಎಂದು ಅನುಮಾನವಾಗಿ ಕಾರ್ಯಪ್ರವೃತ್ತರಾದ ಅವರು ಜಿಲ್ಲೆ ಜಿಲ್ಲೆಗಳಿಂದ ದಾಖಲೆ ತರಿಸಿ ಸರಿಯಾದ ರೀತಿಯಲ್ಲೇ ಸರ್ಕಾರಕ್ಕೆ ಪೆಟ್ಟ ಕೊಟ್ಟಿದ್ದಾರೆ. ಹೀಗಾಗಿ ಶಾಸಕರನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಪಬ್ಲಿಕ್ ಮತ್ತು ಬಿಜೆಪಿ ಬೆಂಬಲಿಗರು ಹಾಡಿ ಹೊಗಳುತ್ತಿದ್ದಾರೆ.

ಮಹೇಶ್ ಟೆಂಗಿನಕಾಯಿ ಮೂಲತಃ ಹುಬ್ಬಳ್ಳಿಯವರು, ವೃತ್ತಿಯಲ್ಲಿ ಉದ್ಯಮಿ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಈ ಹಿಂದೆ ಜಗದೀಶ್ ಶೆಟ್ಟರ್ ಗೆ ಬದಲಾಗಿ ಬಿಜೆಪಿ ಟಿಕೆಟ್ ಪಡೆದಿದ್ದರು. ಬಳಿಕ ಈ ಕ್ಷೇತ್ರದಿಂದ 34000 ವೋಟ್ ಗಳ ಅಂತರದಲ್ಲಿ ಗೆದ್ದು ಬಂದಿದ್ದರು. ವಿಶೇಷವೆಂದರೆ ಅಂದು ಮಹೇಶ್ ವಿರುದ್ಧ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಸ್ಪರ್ಧಿಸಿ ಸೋತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿರುವ ಮಹೇಶ್ ಟೆಂಗಿನಕಾಯಿ ಬಿಜೆಪಿಯ ಕಟ್ಟಾಳು. ಎರಡು ದಶಕಗಳಿಂದ ಬಿಜೆಪಿಯಲ್ಲೇ ಇದ್ದವರು. ಇಷ್ಟು ದಿನ ಅವರ ಹೆಸರು ಇಷ್ಟೊಂದು ಚಾಲ್ತಿಯಲ್ಲಿರಲಿಲ್ಲ. ಆದರೆ ಈಗ ಅವರು ಮಾಡಿದ ಕೆಲಸಕ್ಕೆ ಬಿಜೆಪಿಯ ಇತರೆ ಶಾಸಕರು, ಕಾರ್ಯಕರ್ತರೇ ಅಭಿನಂದಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಚಳಿಯ ನಡುವೆ ಇಂದು ಈ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ