Select Your Language

Notifications

webdunia
webdunia
webdunia
webdunia

ಬೀದಿಗೆ ಬಿದ್ದಿವೆ ವಿಜಯನಗರ ಕಾಲದ ವೀರಗಲ್ಲುಗಳು ಕಾರಣ ಏನು ಗೊತ್ತಾ?

ಬೀದಿಗೆ ಬಿದ್ದಿವೆ ವಿಜಯನಗರ ಕಾಲದ ವೀರಗಲ್ಲುಗಳು ಕಾರಣ ಏನು ಗೊತ್ತಾ?
ರಾಯಚೂರು , ಗುರುವಾರ, 29 ನವೆಂಬರ್ 2018 (15:18 IST)
ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆ ವಿಶಿಷ್ಟವಾಗಿ ಗುರುತಿಸಲ್ಪಟ್ಟಿದೆ. ನಾಡಿನ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಇಲ್ಲಿನ ಶಾಸನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇಲ್ಲಿನ ಶಾಸನಗಳು, ಸ್ಮಾರಕಗತಳು ನಿರ್ಲಕ್ಷ್ಯದಿಂದಾಗಿ ಅನಾಥವಾಗಿವೆ.

ರಾಯಚೂರು ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲಿನ ಅನೇಕ ಜನರು ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ರಾಯಚೂರು ಜಿಲ್ಲೆಯ ಮಸ್ಕಿಯ ಆಶೋಕನ ಶಾಸನ, ಲಿಂಗಸೂಗೂರು ತಾಲೂಕಿನ ಯರಡೋಣಿ ಶಾಸನ, ರಾಯಚೂರಿನ ದೇವಸುಗೂರಿನ ಸೂಗುರೇಶ್ವರ ದೇವಾಲಯದ ಮೇಲೆ ಹಳೆಯ ಕೆತ್ತನೆಗಳು, ಮುದಗಲ್ ಶಾಸನ ಮಾತ್ರವಲ್ಲದೆ ರಾಯಚೂರು ಕೋಟೆ, ನವರಂಗ್ ದರ್ವಾಜಾ, ಕೋಟೆ ದರ್ವಾಜಾ, ಪಂಚ್ ಬೀಬಿ ಪಹಾಡ್ ಸೇರಿದಂತೆ ಅನೇಕ ಐತಿಹಾಸಿಕ ಕಟ್ಟಡ ಹಾಗೂ ಸ್ಮಾರಕಗಳು ಕಾಣಸಿಗುತ್ತವೆ. ಇದಲ್ಲದೇ ಇನ್ನೂ ಅನೇಕ ಶಾಸನಗಳು, ಸ್ಮಾರಕಗಳು ಇದ್ದು ಅದರ ಸಂಶೋಧನೆಗಳು ನಡೆಯುತ್ತಿದೆ.

 ಆದರೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೋನವಾರ ಗ್ರಾಮದಲ್ಲಿ ಕ್ರಿ.ಶ.17-18ನೇ ಶತಮಾನಕ್ಕೆ ಸೇರಿದ ವಿಜಯನಗರ ಕಾಲದ 7 ವೀರಗಲ್ಲು ಶಿಲ್ಪಗಳು ರಕ್ಷಣೆ ಇಲ್ಲದೆ ಅನಾಥವಾಗಿ ಮಣ್ಣಲ್ಲಿ ಹೂತು ಹೋಗುವ ಸ್ಥಿತಿಯಲ್ಲಿವೆ.
ಕಣಶಿಲೆಯ ಚಪ್ಪಡಿ ಕಲ್ಲಿನಲ್ಲಿರುವ ಒಂದು ಶಿಲ್ಪವು ವೀರಮಾಸ್ತಿ ಶಿಲ್ಪ ವಾಗಿದ್ದು, ಇದರಲ್ಲಿ ವೀರನೂ ಹೋರಾಡುವ ಭಂಗಿಯಲ್ಲಿದ್ದು ಬಲಗೈಯಲ್ಲಿ ಖಡ್ಗ , ಎಡಗೈಯಲ್ಲಿ ಕಠಾರಿ ಹಿಡಿದಿದ್ದಾನೆ. ಈತನು ಯುದ್ಧದಲ್ಲಿ ಮರಣ ಹೊಂದಿದ ಮೇಲೆ ನೆನಪಿಗಾಗಿ ನಿರ್ಮಿಸಲಾಗಿದೆ. ಇದೇ ಶಿಲ್ಪದ ಹತ್ತಿರದಲ್ಲಿ ಮಡದಿಯ ಶಿಲ್ಪವು ಇದ್ದು, ಈಕೆ ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ತಂಬಿಗೆ ಹಿಡಿದಿದ್ದಾಳೆ.

ಎರಡನೇ ಶಿಲ್ಪವೂ ನಿಂತ ಭಂಗಿಯಲ್ಲಿದೆ. ಇದೂ ವೀರಗಲ್ಲು ಆಗಿದ್ದು ಬಲಗೈಯಲ್ಲಿ ಖಡ್ಗ ಮತ್ತು ಕಿವಿಯಲ್ಲಿ ಓಲೆ ಧರಿಸಿದ್ದಾನೆ. ಮೂರನೇ ಶಿಲ್ಪವು ವೀರಗಲ್ಲು, ಇದು ನಿಂತ ಭಂಗಿಯಲ್ಲಿದೆ ವೀರನು ಬಲಗೈಯಲ್ಲಿ ಹರಿತವಾದ ಕುಡುಗೋಲು ಹಿಡಿದಿದ್ದಾನೆ. ನಾಲ್ಕನೇ ಶಿಲ್ಪ ಕೂಡ ವೀರಗಲ್ಲಾಗಿದ್ದು, ಇದು ನಿಂತ ಭಂಗಿಯಲ್ಲಿದೆ, ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಕಠಾರಿ ಹಿಡಿದಿದ್ದಾನೆ.
ಐದನೇ ಶಿಲ್ಪವೂ ದಂಡನಾಯಕನ ಶಿಲ್ಪವಾಗಿದ್ದು, ಈತನ ಎದೆಗೆ ಹಚ್ಚಿಕೊಂಡಿರುವಂತೆ ಕತ್ತಿಯನ್ನು ಬಲಗೈಯಲ್ಲಿ ಹಿಡಿದಿದ್ದಾನೆ. ಎಡಗೈ ಇಳಿಬಿಟ್ಟಿದ್ದಾನೆ. ಆರನೇ ಶಿಲ್ಪವೂ ನಿಂತ ಭಂಗಿಯಲ್ಲಿದ್ದು ವೀರ ಬಲಗೈಯಲ್ಲಿ ಕುಡಗೋಲು, ಎಡಗೈಯಲ್ಲಿ ಖಡ್ಗ ಹಿಡಿದಿದ್ದಾನೆ. ಏಳನೇ ಶಿಲ್ಪವೂ ಇಬ್ಬರು ವೀರರು ಹೋರಾಟದ ಭಂಗಿಯಲ್ಲಿದ್ದರೇ ಇವರ ಮಧ್ಯದಲ್ಲಿ ಮಹಿಳೆಯು ಕೂಡ ಹೋರಾಡುವ ಚಿತ್ರವಿದೆ. ಸದರಿ ವೀರಗಲ್ಲಿನ ಸುತ್ತಲೂ ರೈಸ್ ಮಿಲ್ ನಿಂದ ಬಿಡಲಾದ ಕೊಳಚೆ ನೀರು ನಿಂತು ಮಣ್ಣು ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಅಮೂಲ್ಯವಾದ ಐತಿಹಾಸಿಕ ವೀರಗಲ್ಲು ಶಿಲ್ಪಗಳು ಮಣ್ಣಿನಲ್ಲಿ ಹೂತು ಹೋಗುವ ಸಂಭವವಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಡಿ ನಾಡಲ್ಲಿ ಕನ್ನಡ ರಾಜ್ಯೋತ್ಸವ ಸಡಗರ