Publish Date: Tue, 27 Nov 2018 (10:03 IST)
Updated Date: Tue, 27 Nov 2018 (10:05 IST)
ಬೆಂಗಳೂರು: ಶನಿವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ನಟ ಅಂಬರೀಶ್ ಸಾವಿನ ಕೆಲವೇ ಕ್ಷಣಗಳ ಮೊದಲು ಹೇಗಿದ್ದರು ಎಂಬ ಸಂಗತಿಯನ್ನು ಅವರ ಆಪ್ತರೊಬ್ಬರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ಅಂಬರೀಶ್ ಶನಿವಾರ ರಾತ್ರಿ ಊಟ ಮುಗಿಸಿ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತಿದ್ದರಂತೆ. ಆ ಸಂದರ್ಭದಲ್ಲಿ ಟಿವಿಯಲ್ಲಿ ಅಂದು ಮಂಡ್ಯದಲ್ಲಿ ನಡೆದಿದ್ದ ಬಸ್ ದುರಂತದ ಬಗ್ಗೆ ಸುದ್ದಿ ಪ್ರಸಾರವಾಗುತ್ತಿತ್ತು.
ಅದನ್ನು ನೋಡಿ ವಿಚಲಿತರಾಗಿದ್ದರೋ ಏನೋ, ಆಗಾಗ ಚಾನೆಲ್ ಬದಲಾಯಿಸುತ್ತಾ ಕೂತಿದ್ದವರು, ಸಾಕು ಇನ್ನು ಮಲಗುತ್ತೇನೆ ಎಂದು ತಮ್ಮ ಕೊಠಡಿಗೆ ತೆರಳಿದ್ದರು. ಕೆಲವೇ ಕ್ಷಣಗಳ ನಂತರ ವಿಪರೀತ ಎದೆ, ಬೆನ್ನು ನೋಯುತ್ತಿದೆ ಎಂದು ಜೋರಾಗಿ ಕೂಗಿಕೊಂಡರಂತೆ.
ಅಂಬಿ ಕೂಗಿದ ಸದ್ದಿಗೆ ಅವರ ಕೇರ್ ಟೇಕರ್ ಗಳು ಓಡಿ ಹೋಗಿ ಅವರ ಬೆನ್ನು, ಕುತ್ತಿಗೆ ಮಸಾಜ್ ಮಾಡಿ ಕೃತಕ ಉಸಿರಾಟ ಅಳವಡಿಸಿದ್ದರಂತೆ. ನಂತರ ವೀಲ್ ಚೇರ್ ನಲ್ಲಿ ಕೂರಿಸಿಕೊಂಡು ಲಿಫ್ಟ್ ಮೂಲಕ ಅವರನ್ನು ಕೆಳಗೆ ಕಾರಿನ ಬಳಿ ತರುವಷ್ಟರಲ್ಲೇ ಅಂಬಿ ಉಸಿರಾಟ ನಿಲ್ಲಿಸಿದ್ದರು. ಅವರ ಮೈ ತಣ್ಣಗಾಗಿತ್ತು, ಎದೆ ಬಡಿತವೂ ನಿಂತಿತ್ತು ಎಂದು ಆಪ್ತರು ವಿವರಿಸಿದ್ದಾರೆ. ಇದೆಲ್ಲಾ ಕೇವಲ ಅರ್ಧಗಂಟೆಯೊಳಗೆ ನಡೆದು ಹೋಗಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅಂಬಿ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.