Publish Date: Sun, 24 Feb 2019 (15:48 IST)
Updated Date: Sun, 24 Feb 2019 (15:50 IST)
ಯಾವುದೇ ಪಕ್ಷವಾದರೂ ಸರಿ, ಚುನಾವಣೆಯಲ್ಲಿ ನಿಲ್ಲಿ ಎಂದು ಮಂಡ್ಯದ ಜನತೆ ಒತ್ತಡ ಹೇರುತ್ತಿದ್ದಾರೆ. ಅವರ ಪ್ರೀತಿ, ಅಭಿಮಾನಕ್ಕೆ ಸದಾ ಚಿರಋಣಿ ಎಂದು ನಟ ಅಂಬರೀಶ್ ಅವರ ಪತ್ನಿ ಸುಮಲತ ಹೇಳಿದ್ದಾರೆ.
ಮಂಡ್ಯದ ಬಗ್ಗೆ ಅಂಬರೀಶ್ ಅವರು ಅಪಾರ ಕನಸನ್ನು ಇಟ್ಟುಕೊಂಡಿದ್ದರು. ಅವರ ಕನಸನ್ನು ನನಸು ಮಾಡುವುದು ನನ್ನ ಉದ್ದೇಶ. ಮಂಡ್ಯದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಅಂಬರೀಶ್ ಅವರ ಮೂರನೇ ತಿಂಗಳ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಇಲ್ಲ ಎನ್ನುವುದೇ ಮನಸ್ಸಿಗೆ ತುಂಬಾ ನೋವು ಮತ್ತು ಬೇಸರ ತರಿಸಿದೆ. ಅವರು ಬಿಟ್ಟುಹೋದ ಆದರ್ಶಗಳು ಮತ್ತು ಕನಸುಗಳನ್ನು ಈಡೇರಿಸುವುದು ನನ್ನ ಕೆಲಸ ಎಂದು ಹೇಳಿದರು.
ಕಾಂಗ್ರೆಸ್ನಿಂದ ಚುನಾವಣೆಗೆ ಸ್ಪರ್ಧಿಸುವ ಒಲವಿರುವುದು ನಿಜ. ಆದರೆ ಸ್ಪರ್ಧೆ ಯಾವ ಪಕ್ಷದಿಂದ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಆದರೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಅಭಿಮಾನಿಗಳು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.