ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡರನ್ನು ಹತ್ಯೆ ಮಾಡಲು ಶಾಸಕ ವಿನಯ್ ಕುಲಕರ್ಣಿಯೇ ಸುಪಾರಿ ನೀಡಿರುವ ವಿಚಾರವನ್ನು ಈಗ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಒಪ್ಪಿಕೊಂಡಿದ್ದು, ವಿನಯ್ ಕುಲಕರ್ಣಿ ಯಾವ ರೀತಿ ಪ್ಲ್ಯಾನ್ ಮಾಡಿದ್ದರು ಎಂಬುದನ್ನೂ ಬಿಚ್ಚಿಟ್ಟಿದ್ದಾನೆ.
ಯೋಗೀಶ್ ಗೌಡರನ್ನು ಹತ್ಯೆ ಮಾಡಿಸಿದ್ದೇ ಶಾಸಕ ವಿನಯ್ ಕುಲಕರ್ಣಿ ಎಂದು ಆರೋಪಿ ಬಸವರಾಜ ಮುತ್ತಗಿ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಇದು ಶಾಸಕರಿಗೆ ಮತ್ತಷ್ಟು ಉರುಳಾಗಿದೆ. 2016 ಜೂನ್ 15 ರಂದು ಯೋಗೀಶ್ ಗೌಡರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಹೆಸರು ಕೇಳಿಬಂದಿತ್ತು. ಇದೀಗ ಪ್ರಮುಖ ಆರೋಪಿಯೇ ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ಇದು ವಿನಯ್ ಕುಲಕರ್ಣಿಗೆ ವಿರುದ್ಧ ಪ್ರಮುಖ ಸಾಕ್ಷ್ಯ ಒದಗಿಸಿದಂತಾಗಿದೆ.
ವಿನಯ್ ಕುಲಕರ್ಣಿ ಮೊದಲು ಧಾರವಾಡದ ಹುಡುಗರಿಂದಲೇ ಹತ್ಯೆ ಮಾಡಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಧಾರವಾಡದ ಹುಡುಗರು ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಬೆಂಗಳೂರಿನಿಂದ ಹುಡುಗರ ಕರೆಸಿ ಕೃತ್ಯವೆಸಗಲು ಹೇಳಿದರು. ಅದರಂತೆ ಬೆಂಗಳೂರಿನಿಂದ ಹುಡುಗರನ್ನು ಕರೆಸಿ ವಿನಯ್ ಕುಲಕರ್ಣಿ ಆದೇಶದಂತೆ ಕೊಲೆ ಮಾಡಲಾಗಿದೆ ಎಂದು ಬಸವರಾಜ ಮುತ್ತಗಿ ಹೇಳಿದ್ದಾರೆ.
ವಿನಯ್ ಕುಲಕರ್ಣಿ ಸಲಹೆ ಮೇರೆಗೆ ಪ್ರಕರಣದ ಎಂಟನೇ ಆರೋಪಿ ದಿನೇಶ್ ಬೆಂಗಳೂರಿನ ಹುಡುಗರನ್ನು ಕರೆಸಿದ್ದ. ಅವರು ಎರಡು ದಿನಗಳ ಸಮಯ ಕೇಳಿದ್ದರು. ಬಳಿಕ 20 ಲಕ್ಷ ರೂ., ತಮ್ಮ ಬಂಧನವಾಗದಂತೆ ನೋಡಿಕೊಳ್ಳಬೇಕು ಎಂದು ಷರತ್ತು ಹಾಕಿ ಕೆಲಸ ಮಾಡಿಕೊಡಲು ಒಪ್ಪಿದ್ದರು. ಅದರಂತೆ ಬೆಂಗಳೂರು ಹುಡುಗರು ಕೃತ್ಯವೆಸಗಿದ ಬಳಿಕ ಧಾರವಾಡದ ಹುಡುಗರನ್ನು ಶರಣಾಗಲು ವಿನಯ್ ಕುಲಕರ್ಣಿ ಯೋಜನೆ ಹಾಕಿದ್ದರು. ಯೋಜನೆ ಪ್ರಕಾರ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ನಜೀರ್, ಸುನಿಲ್ ಸೇರಿದಂತೆ ಹಂತಕರ ಗುಂಪು ಬಂದಿತ್ತು. ಹತ್ಯೆಗೆ ವಿನಯ್ ಕುಲಕರ್ಣಿಯೇ ಮುತ್ತಗಿಗೆ ಕಂಟ್ರಿ ಮೇಡ್ ಪಿಸ್ತೂಲ್ ನೀಡಿದ್ದರು. ವಿನಯ್ ಸೋದರ ಮಾವ ಪಿಸ್ತೂಲ್ ನ್ನು ಆರೋಪಿಗಳ ಕೈಗೆ ಕೊಟ್ಟಿದ್ದರು. ಈ ವೇಳೆ ವಿನಯ್ ಕುಲಕರ್ಣಿ ಕೂಡಾ ಅಲ್ಲಿಯೇ ಇದ್ದರು. ಮೊದಲು ಮೇ ಬಳಿಕ ಜೂನ್ ನಲ್ಲಿ ಎರಡು ಬಾರಿ ಯೋಗೀಶ್ ಗೌಡ ಹತ್ಯೆಗೆ ಯತ್ನಿಸಿ ವಿಫಲರಾಗಿದ್ದರು. ಬಳಿಕ ಜೂನ್ 15 ರಂದು ಯೋಗೀಶ್ ಗೌಡನನ್ನು ಜಿಮ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಯಿತು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.