Publish Date: Mon, 27 Jul 2026 (14:16 IST)
Updated Date: Mon, 27 Jul 2026 (14:21 IST)
ಬೆಂಗಳೂರು: "ತಾಯಿಯ ಕರುಳು ಮಗುವಿನ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಬಲ್ಲದು" ಎಂಬ ಮಾತಿದೆ. ಆದರೆ, ಆ ತಾಯಿ ತನ್ನ ಮಗುವಿನ ರಕ್ಷಣೆಗೆ ಸರ್ಕಾರದ ಕೆಲಸವನ್ನು ತಾನೇ ಕೈಗೆತ್ತಿಕೊಳ್ಳುವ ಸ್ಥಿತಿ ಬಂದರೆ, ಅದನ್ನು ಏನೆನ್ನಬೇಕು?
ಬೆಂಗಳೂರಿನ ರಸ್ತೆಗಳಲ್ಲಿ ದಿನೇದಿನೇ ಪ್ರಾಣಾಪಾಯ ಒಡ್ಡುತ್ತಿರುವ ಭೀಕರ ರಸ್ತೆ ಗುಂಡಿಗಳಿಂದ ಬೇಸತ್ತ ತಾಯಿಯೊಬ್ಬರು, ತಾವೇ ಮಣ್ಣು ಮತ್ತು ಕಲ್ಲುಗಳನ್ನು ಹೊತ್ತು ತಂದು ರಸ್ತೆಯ ಗುಂಡಿಯನ್ನು ಮುಚ್ಚಿರುವ ಘಟನೆ ಈಗ ಇಡೀ ನಗರದ ಗಮನ ಸೆಳೆದಿದೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ದೃಶ್ಯವು ಒಂದು ಕಡೆ ತಾಯಿಯ ಅಪ್ರತಿಮ ಪ್ರೀತಿ ಮತ್ತು ಜಾಗರೂಕತೆಗೆ ಸಾಕ್ಷಿಯಾಗಿದ್ದರೆ, ಇನ್ನೊಂದೆಡೆ ಬೃಹತ್ ಬೆಂಗಳೂರು ಪ್ರಾಧಿಕಾರ , ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಸರ್ಕಾರದ ಕೆಲಸಕ್ಕೆ ನಾಗರಿಕರೇ ರಸ್ತೆಗೆ ಇಳಿಯುವ ಸ್ಥಿತಿ
ಬೆಂಗಳೂರು ಇಂದು ಜಾಗತಿಕ ಮಟ್ಟದ ಐಟಿ-ಬಿಟಿ ಹಬ್ ಆಗಿ ಗುರುತಿಸಿಕೊಂಡಿರಬಹುದು. ಆದರೆ, ಇಲ್ಲಿನ ಮೂಲಭೂತ ಸೌಕರ್ಯಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ.
ಪ್ರಾಣಭಯದಲ್ಲಿ ದಿನನಿತ್ಯದ ಪ್ರಯಾಣ: ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಾಗೂ ಕುಟುಂಬದವರನ್ನು ಕರೆದೊಯ್ಯುವಾಗ ಎಲ್ಲಿ ಗುಂಡಿಗೆ ಬಿದ್ದು ಅನಾಹುತ ಸಂಭವಿಸುತ್ತದೋ ಎಂಬ ಭಯದಲ್ಲೇ ಸಾರ್ವಜನಿಕರು ಬದುಕುತ್ತಿದ್ದಾರೆ.
ಮೌನಕ್ಕೆ ಶರಣಾದ ಅಧಿಕಾರಿಗಳು: ನೂರಾರು ದೂರುಗಳನ್ನು ನೀಡಿದರೂ, ಸ್ಥಳೀಯ ಸಂಸ್ಥೆಗಳು ಅಥವಾ ನಗರಾಭಿವೃದ್ಧಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.
ತಾಯಿಯೊಬ್ಬಳ ಆಕ್ರೋಶದ ನಿರ್ಧಾರ: ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದಿಂದ ಬೇಸತ್ತ ಈ ತಾಯಿ, ಕೇವಲ ಸಾಕ್ಷಿಯಾಗುಳಿಯದೆ ತಾನೇ ಕೈಗೆ ಬುಟ್ಟಿ ಹಿಡಿದು ಮಣ್ಣು ಹಾಕಿ ಗುಂಡಿ ಮುಚ್ಚಿದ್ದಾರೆ. ಇದು ಅವರ ಜವಾಬ್ದಾರಿಯಲ್ಲ, ಬದಲಿಗೆ ಆಡಳಿತದ ಮೇಲಿನ ಆಕ್ರೋಶದ ಸಂಕೇತ!
ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ರಸ್ತೆ ತೆರಿಗೆ , ಆಸ್ತಿ ತೆರಿಗೆ ಹಾಗೂ ಜಿಎಸ್‌ಟಿ ವಸೂಲಿ ಮಾಡುವ ಸರ್ಕಾರಕ್ಕೆ, ಒಂದೊಳ್ಳೆಯ, ಸುರಕ್ಷಿತ ರಸ್ತೆ ನೀಡಲು ಸಾಧ್ಯವಿಲ್ಲವೇ? ತಾಯಿಯೊಬ್ಬರು ರಸ್ತೆಗೆ ಇಳಿದು ಗುಂಡಿ ಮುಚ್ಚಿರುವುದು ಆಡಳಿತಗಾರರು ನಾಚಿಕೆಯಿಂದ ತಲೆತಗ್ಗಿಸಬೇಕಾದ ವಿಷಯ. ನಾಗರಿಕರು ತಮಗೆ ನಿಗದಿಪಡಿಸಿದ ಕೆಲಸಗಳನ್ನು ಮಾಡಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಸರ್ಕಾರ ಮತ್ತು ಜಿಬಿಎ ತಮ್ಮ ಪ್ರಾಥಮಿಕ ಕರ್ತವ್ಯವನ್ನೇ ಮರೆತಿವೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ