ಬೆಂಗಳೂರು: ನಗರದಲ್ಲಿ 50 ವರ್ಷಗಳಲ್ಲೇ ಮೇ ತಿಂಗಳಲ್ಲಿ ಎರಡನೇ ಅತ್ಯಂತ ಚಳಿಯ ದಿನ ಗುರುವಾರ (ಮೇ.12) ರಂದು ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಬೆಂಗಳೂರು ನಗರದಲ್ಲಿ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 34 ಡಿಗ್ರಿಯಿಂದ 23 ಡಿಗ್ರಿಗೆ ತಾಪಮಾನ ಒಮ್ಮೆಲೆ ಕುಸಿದಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ತಿಳಿಸಿದೆ.
ಇದಕ್ಕೂ ಮೊದಲು 1972ರಲ್ಲಿ ಮೇ 14 ರಂದು ಅತ್ಯಂತ ಕಡಿಮೆ ತಾಪಮಾನ ಅಂದರೆ 22.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅಲ್ಲದೇ ಅಂದು ಕನಿಷ್ಠ ತಾಪಮಾನವೂ ಮೂರು ಡಿಗ್ರಿ ಕಡಿಮೆಯಾಗಿ 19.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ಹಳೆ ದಾಖಲೆ ತಿಳಿಸಿದೆ.
ಮೇ ತಿಂಗಳಲ್ಲಿ ಇಂತಹ ಸುಂದರವಾದ ತಾಪಮಾನ ದಾಖಲಾಗಲು ಕಾರಣ ಅಸಾನಿ ಚಂಡಮಾರುತದ ಪ್ರಭಾವ ಎಂದು ತಿಳಿದು ಬಂದಿದೆ. ಈಶಾನ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ವಿರಳವಾದ ಮೋಡಗಳು ಮತ್ತು ತಂಪಾದ ಗಾಳಿಯು ಚಾಲ್ತಿಯಲ್ಲಿದ್ದು, ಇದು ತಾಪಮಾನವನ್ನು ಕಡಿಮೆ ಮಾಡಿ ಮಳೆಯನ್ನು ತರುತ್ತಿರುವುದರಿಂದ ನಗರದಲ್ಲಿ ಆಹ್ಲಾದಕರ ವಾತಾವರಣ ಉಂಟಾಗಿದೆ.
ಇದೇ ತಾಪಮಾನ ಇನ್ನು ಎರಡು ದಿನ ಮುಂದುವರಿಯಲಿದೆ ಹಾಗೂ ನಂತರ ಎಂದಿನ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಕ್ಕೂ ಮೊದಲು ಮೇ 11 ರಂದು, ಅಸನಿ ಚಂಡಮಾರುತದ ಪ್ರಭಾವದಿಂದ ಬೆಂಗಳೂರಿನಲ್ಲಿ ತಾಪಮಾನದ ಮಟ್ಟವು ಗಮನಾರ್ಹವಾಗಿ ಕುಸಿದಿತ್ತು. ಅಲ್ಲದೇ ಭಾರಿ ಮಳೆಯಾಗಿತ್ತು.
ನಗರವು ಕಳೆದ 10 ವರ್ಷಗಳಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ. ಮೇ 11 ರಂದು ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇತ್ತು. ಮಾರ್ಚ್ ತಿಂಗಳ ಮೊದಲ ಒಂಬತ್ತು ದಿನ ನಗರದ ಗರಿಷ್ಠ ಉಷ್ಣತೆ 32 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲೇ ಇತ್ತು. ಅದೇ ರೀತಿ ಮೊದಲ 14 ದಿನದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಒಳಗೆ ದಾಖಲಾಗಿತ್ತು.