Publish Date: Fri, 16 Mar 2018 (09:31 IST)
Updated Date: Fri, 16 Mar 2018 (09:34 IST)
ಬೆಂಗಳೂರು: ವೀರಪ್ಪ ಮೊಯಿಲಿ ಮಾಡಿದ ಟ್ವೀಟ್ ಒಂದು ಇದೀಗ ಬಹು ಚರ್ಚೆಯ ವಿಷಯವಾಗಿದೆ. ಸಾರ್ವಜನಿಕವಾಗಿ ಪಕ್ಷಕ್ಕೆ ಮುಜುಗರ ತರುವಂತಹ ಟ್ವೀಟ್ ಮಾಡಿ ಇದೀಗ ತನಗೇನೂ ಗೊತ್ತೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮೊಯಿಲಿ ಬಾಯಿ ಒರೆಸಿಕೊಂಡಿದ್ದಾರೆ.
ಕಾಂಗ್ರೆಸ್ ನಲ್ಲಿ ಹಣದ ಪ್ರಭಾವ ಹೆಚ್ಚಾಗುತ್ತಿದೆ. ರಸ್ತೆ ಗುತ್ತಿಗೆದಾರರೊಂದಿಗೆ ಲೋಕೋಪಯೋಗಿ ಸಚಿವರ ನಂಟು ಹೆಚ್ಚಿದೆ ಎಂದೆಲ್ಲಾ ಟ್ವೀಟ್ ಮಾಡಿ ತಮ್ಮ ಪಕ್ಷದ ಮರ್ಯಾದೆಯನ್ನು ತಾವೇ ಹರಾಜು ಹಾಕಿದ್ದ ವೀರಪ್ಪ ಮೊಯಿಲಿ ಇದೀಗ ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.
ವೀರಪ್ಪ ಮೊಯಿಲಿಯವರ ಅಧಿಕೃತ ಖಾತೆಯಿಂದ ಟ್ವೀಟ್ ಆದ ಟ್ವೀಟ್ ಇದಾಗಿತ್ತು. ಹಾಗಿದ್ದರೂ ಆ ಟ್ವೀಟ್ ಗೂ ನನಗೂ ಸಂಬಂಧವಿಲ್ಲ. ಪಕ್ಷದ ವಿಚಾರ ಮಾತನಾಡಲು ನಾನು ಮಾಧ್ಯಮದ ಮುಂದೆ ಹೋಗಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.
ಅದೇನೇ ಇರಲಿ, ತಮ್ಮ ಪುತ್ರನಿಗೆ ಟಿಕೆಟ್ ನಿರಾಕರಿಸಿ ಲೋಕೋಪಯೋಗಿ ಸಚಿವ ಮಹದೇವಪ್ಪ ಪುತ್ರನಿಗೆ ಟಿಕೆಟ್ ನೀಡಲು ನಿರ್ಧರಿಸಿರುವುದಕ್ಕೆ ಅಸಮಾಧಾನಗೊಂಡ ಮೊಯಿಲಿ ಇಂತಹದ್ದೊಂದು ಟ್ವೀಟ್ ಮಾಡಿದ್ದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ