ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಆರೋಪಿಯಾಗಿ ಮಂತ್ರಿಸ್ಥಾನ ಕಳೆದುಕೊಂಡಿದ್ದ ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ ಮಾಡಿರುವ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರ ಪ್ರಮುಖ ಆರೋಪಿಯಾಗಿದ್ದರು. ಇದೇ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಕೆಲವು ದಿನಗ ಜೈಲು ವಾಸವನ್ನೂ ಅನುಭವಿಸಿದ್ದಾರೆ.
ಇತ್ತೀಚೆಗಷ್ಟೇ ಅವರು ಉಪಚುನಾವಣೆಗೆ ಮುನ್ನ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇದೀಗ ಉಪಚುನಾವಣೆ ಮುಗಿದ ಬೆನ್ನಲ್ಲೇ ನಾಗೇಂದ್ರರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಉಪಚುನಾವಣೆ ಮುಗಿಯುವುದನ್ನೇ ಕಾಂಗ್ರೆಸ್ ಕಾಯುತ್ತಿದೆ.
ಈ ಬಾರಿ ಬಳ್ಳಾರಿಯ ಸಂಡೂರಿನಲ್ಲಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಪಕ್ಷದ ಗೆಲುವಿಗಾಗಿ ನಾಗೇಂದ್ರ ಕೂಡಾ ಶ್ರಮಿಸಿದ್ದಾರೆ. ಇದೀಗ ಸಂಡೂರಿನಲ್ಲಿ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಸಫಲವಾದರೆ ನಾಗೇಂದ್ರ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ನಿನ್ನೆ ಎಚ್ ಡಿ ಕೋಟೆ ತಾಲೂಕಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ಸಿಎಂ ಸಿದ್ದರಾಮಯ್ಯ ಇದೇ ಮಾತನ್ನು ಹೇಳಿದ್ದಾರೆ. ಹೀಗಾಗಿ ಉಪಚುನಾವಣೆ ಬಳಿಕ ನಾಗೇಂದ್ರ ಸಂಪುಟ ಸೇರುವುದು ಪಕ್ಕಾ ಆಗಿದೆ.