ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರೋದು ಕನ್ನಡಿಗರೋ, ಕೇರಳದವರೋ.. ವೋಟ್ ಬ್ಯಾಂಕ್ ಗಾಗಿ ಸರ್ಕಾರ ಈ ಮಟ್ಟಕ್ಕಿಳಿಯುವುದೇ ಎಂದು ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಗಿಲು ಲೇಔಟ್ ಅಕ್ರಮ ವಸತಿಗಳ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಗೆ ಅವರು ಈ ರೀತಿ ಕಿಡಿ ಕಾರಿದ್ದಾರೆ.
ಕೇರಳ ಸರ್ಕಾರ ಈ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿಂದ ಸೂಚನೆ ಬಂದ ಬೆನ್ನಲ್ಲೇ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಬೇರೆ ಕಡೆ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಸುನಿಲ್ ಕುಮಾರ್ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ, ಕೇರಳಿಗರೋ ?
ಅಧಿಕಾರ ಹಸ್ತಾಂತರದ ಗೊಂದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮುಳುಗಿ ಮೈಮರೆತಿರುವಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಮ್ಮ ರಾಜ್ಯದಲ್ಲಿ ಆಡಳಿತ ಹೇಗಿರಬೇಕೆಂದು ಡಿಕ್ಟೇಟ್ ಮಾಡುತ್ತಾರೆ.
ಅದನ್ನು ನೋಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲಯಾಳಿ ಕೆ.ಸಿ.ವೇಣುಗೋಪಾಲ್ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇದಾದ ಬಳಿಕ ಕೋಗಿಲು ಕ್ರಾಸ್ ಬಳಿ ಅಕ್ರಮ ವಲಸಿಗರು ರಚಿಸಿಕೊಂಡಿದ್ದ ಲೇಔಟ್ ತೆರವು ಮಾಡಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುತ್ತಾರೆ.
ಎಲ್ಲ ಖುರ್ಚಿ ಮೋಹ, ಕೇರಳ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ವೋಟು ದಕ್ಕಿಸಿಕೊಳ್ಳಬೇಕೆಂಬ ದಾಹ. ಈ ಹಿಂದೆ ವಯನಾಡಿನಲ್ಲಿ ಆನೆ ದಾಳಿಗೆ ಮೃತಪಟ್ಡವರಿಗೆ ೩೦ ಲಕ್ಷ ರೂ. ಪರಿಹಾರ ನೀಡಿದ್ದ ಸರ್ಕಾರ ಈಗ ಕೇರಳ ಚುನಾವಣೆ ಕಾರಣಕ್ಕೆ ರಾಜ್ಯದ ಮರ್ಯಾದೆಯನ್ನೇ ಬೀದಿ ಪಾಲು ಮಾಡಿದೆ.
ಕರ್ನಾಟಕದ ಬಂಡೆ ಸರ್ಕಾರವನ್ನು ಕೇರಳದ ಕಮ್ಯುನಿಷ್ಟ್ ಸರ್ಕಾರ ಬುಲ್ಡೋಜರ್ ಅಡಿಯಲ್ಲಿ ಹಾಕಿ ರೋಲ್ ಮಾಡಿದರೂ ಸಹಿಸಿಕೊಂಡಿರುವ ಕಾಂಗ್ರೆಸ್ ನ "ವೀರಕನ್ನಡಿಗರಿಗೆ" ಭೇಷ್ ಎನ್ನಲೇಬೇಕು ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.