ರಾಜ್ಯದ ಎಲ್ಲ ಬ್ಯಾಂಕುಗಳಲ್ಲೂ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಲ್ಲಿ ಈಗಾಗಲೇ ಒಂದೆರಡು ಸುತ್ತಿನ ಗಂಭೀರ ಚರ್ಚೆಗಳು ನಡೆದಿದ್ದು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕಾಗಿದೆ. ನಿಯಮಗಳು ರೂಪುಗೊಂಡ ಬಳಿಕ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.ರಾಜ್ಯದ ಎಲ್ಲ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಬ್ಯಾಂಕುಗಳು ಸೇರಿದಂತೆ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಕಾರ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಕನ್ನಡ ಭಾಷಾ ಜ್ಞಾನ ಅತ್ಯಗತ್ಯಗೊಳಿಸಿ, ಗ್ರಾಹಕರೊಂದಿಗೆ ಉದ್ಯೋಗಿಗಳು ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಳೆದ ಮಾರ್ಚ್ ಅಧಿವೇಶನದಲ್ಲಿ ಅಂಗೀಕರಿಸಿಲ್ಪಟ್ಟಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಅಡಿ ಈ ನಿಯಮ ಜಾರಿಗೊಳಿಸಲು ಸರ್ಕಾರ ಹೊರಟಿದೆ ಅಂತಾ ಮೂಲಗಳಿಂದ ತಿಳಿದು ಬಂದಿದೆ.