ಬೆಂಗಳೂರು: ಜೀವಂತ ಮೊಸಳೆ ಮರಿಯೊಂದನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ನಗರದ ದಕ್ಷಿಣ ವಿಭಾಗದ ಚನ್ನಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ಅಬ್ದುಲ್ ಖಾಲಿದ್ ಹಾಗೂ ರಾಮನಗರದ ಬೂದಿಗುಪ್ಪೆಯ ಬಿ.ಎಸ್.ಗಂಗಾಧರ್ ಬಂಧಿತರು. ಆರೋಪಿಗಳಿಂದ ಜೀವಂತ ಮೊಸಳೆ ಮರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರೂ ನೀರಿನ ಕ್ಯಾನ್‌ನಲ್ಲಿ ಜೀವಂತ ಮೊಸಳೆ ಮರಿ ಇರಿಸಿಕೊಂಡು ಬಂದಿದ್ದರು. ಇವರು ಸಿಕೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಈಶ್ವರಿ ಥಿಯೇಟರ್ ಕಟ್ಟಡದ ಕೆಳಭಾಗದಲ್ಲಿ ನಿಂತು ಆ ಮೊಸಳೆ ಮರಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ ಇಬ್ಬರ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.