ಉಡುಪಿ: ರೈಲು ಹಳಿಯ ಕಬ್ಬಿಣ ಕದಿಯುತ್ತಿದ್ದ ಇಬ್ಬರು ಬಾಲಕರನ್ನು ಹಿಡಿದು ಪ್ರಶ್ನಿಸಿದ ರೈಲು ಸಿಬ್ಬಂದಿಗೆ ಈಗ ಸನ್ಮಾನದ ಬದಲು ಕೇಸ್ ಜಡಿದು ಶಿಕ್ಷೆ ನೀಡಲಾಗುತ್ತಿದೆ!
ಇದು ನಡೆದಿರುವುದು ಉಡುಪಿಯಲ್ಲಿ. ಹಳಿಯ ಕಬ್ಬಿಣ ಕದಿಯುತ್ತಿದ್ದ ಇಬ್ಬರು ಶಾಲಾ ಬಾಲಕರನ್ನು ಅಲ್ಲಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಂಕಣ ರೈಲ್ವೇ ಸಿಬ್ಬಂದಿಯೊಬ್ಬರು ಬೆತ್ತದಿಂದ ಹೊಡೆದಿದ್ದಾರೆ. ಬಳಿಕ ನೀವು ಯಾರು ನಿಮ್ಮ ಶಾಲೆ ಯಾವುದು ಎಂದೆಲ್ಲಾ ಪ್ರಶ್ನಿಸಿ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೈಲು ಹಳಿಯ ಕಬ್ಬಿಣ ಕಿತ್ತು ಹಾಕುವುದು ಗಂಭೀರ ವಿಚಾರವಾಗಿದ್ದು, ಇದರಿಂದ ರೈಲು ಹಳಿ ತಪ್ಪಿ ಭಾರೀ ಅನಾಹುತವಾಗುವ ಸಂಭವವಿದೆ. ಇಂತಹ ಅಪಾಯ ತಪ್ಪಿಸಿದ ಸಿಬ್ಬಂದಿಗೆ ಈಗ ಸನ್ಮಾನದ ಬದಲು ಶಿಕ್ಷೆಯಾಗುತ್ತಿರುವುದು ವಿಪರ್ಯಾಸ.
ಇಬ್ಬರು ಶಾಲಾ ಬಾಲಕರಾಗಿದ್ದು ಇವರಲ್ಲಿ ಒಬ್ಬಾತನ ಪೋಷಕರು ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ಈ ಕಾರಣಕ್ಕೆ ಸಿಬ್ಬಂದಿ ಮೇಲೆ ಈಗ ಕೇಸ್ ದಾಖಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರೈಲು ಹಳಿಗೆ ಹಾನಿ ಮಾಡುವುದು ಗಂಭೀರ ಅಪರಾಧವಾಗಿದೆ. ಈ ತಪ್ಪು ಮಾಡಿದವರನ್ನು ಹಿಡಿದುಕೊಟ್ಟ ಸಿಬ್ಬಂದಿ ಮೇಲೆಯೇ ಕೇಸ್ ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.