Select Your Language

Notifications

webdunia
webdunia
webdunia
webdunia

ಯಾರ ಕೈವಾಡ ಇದ್ದರೂ ಒದ್ದು ಒಳಗೆ ಹಾಕಿ: ಡಿಕೆ ಶಿವಕುಮಾರ್‌ ಸವಾಲು

ಯಾರ ಕೈವಾಡ ಇದ್ದರೂ ಒದ್ದು ಒಳಗೆ ಹಾಕಿ: ಡಿಕೆ ಶಿವಕುಮಾರ್‌ ಸವಾಲು
bengaluru , ಸೋಮವಾರ, 18 ಏಪ್ರಿಲ್ 2022 (16:18 IST)

ಹುಬ್ಬಳ್ಳಿ ಘಟನೆಯಲ್ಲಿ ಯಾವುದೇ ಪ್ರಭಾವಿ ವ್ಯಕ್ತಿಯ ಕೈವಾಡ ಇದ್ದರೂ ಅವರನ್ನು ಒದ್ದು ಒಳಗೆ ಹಾಕಲಿ, ನನ್ನ ಕೈವಾಡ ಇದ್ದರೂ ನನ್ನನ್ನು ಒಳಗೆ ಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಅಂತ ಸರಕಾರ ಹೇಳುತ್ತಿದೆ. ಆದರೆ ಯಾರು ಆ ಪ್ರಭಾವಿ ಎಂದು ಬಹಿರಂಗಪಡಿಸಲು. ತನಿಖೆಯಲ್ಲಿ ಸಾಬೀತಾದರೆ ಒದ್ದು ಒಳಗೆ ಹಾಕಲಿ ಎಂದರು.

ಈಶ್ವರಪ್ಪನವರು ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಹರ್ಷ ಶವಯಾತ್ರೆ ಮಾಡಿದರೂ ಕೇಸ್ ಹಾಕಲಿಲ್ಲ. ಹಲವು ಬಾರಿ ಬಿಜೆಪಿ ನಾಯಕರು ಕಾನೂನು ಉಲ್ಲಂಘಿಸಿದರೂ ಅವರ ಮೇಲೆ ಕೇಸ್ ಹಾಕದೆ, ನಮ್ಮ ಮೇಲೆ ಮಾತ್ರ ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಳೆದ ಒಂದು ವರ್ಷದಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಅನೇಕ ಬಾರಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ಮಾಡಿದರೆ ತಪ್ಪೇನು ಎಂದು ಮುಖ್ಯಮಂತ್ರಿಗಳೇ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳೇ ಸಮರ್ಥನೆಗಿಳಿದರೆ ರಾಜ್ಯದ ಸ್ಥಿತಿ ಏನಾಗಬಹುದು ಎಂದು ಅವರು ಪ್ರಶ್ನಿಸಿದರು.

ನಾವು ಪ್ರತಿಭಟನೆ ಮಾಡಿದರೆ ಜೈಲಿಗೆ ಹಾಕ್ತಾರೆ. ಅದೇ ಈಶ್ವರಪ್ಪ ರಾಜೀನಾಮೆ ಕೊಡಲು ನೂರಾರು ಕಾರುಗಳಲ್ಲಿ ಮೆರವಣಿಗೆ ಬಂದರೆ ಸುಮ್ಮನೆ ಇರುತ್ತಾರೆ. ಸರಕಾರಕ್ಕೆ ತಮ್ಮ ಸಚಿವರು ಹಾಗೂ ಮುಖಂಡರ ಮೇಲೆಯೇ ನಿಯಂತ್ರಣ ಇಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ನಾನು ಇದೇ ಮೊದಲ ಬಾರಿ ನೋಡುತ್ತಿರುವುದು ಎಂದು ಡಿಕೆ ಶಿವಕುಮಾರ್‌ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕಕ್ಕೆ ಕಾಲಿಡುವುದೇ ಶರದ್‌ ಪವಾರ್‌ ಸಾರಥ್ಯದ ಎನ್‌ ಸಿಪಿ?