Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಕೇಸ್ ಗೆ ಟ್ವಿಸ್ಟ್: ಮಾಜಿ ಕಾರು ಚಾಲಕ ಬಹಿರಂಗಪಡಿಸಿದ ಸ್ಪೋಟಕ ಸತ್ಯಗಳು

Prajwal Revanna

Krishnaveni K

ಹಾಸನ , ಮಂಗಳವಾರ, 30 ಏಪ್ರಿಲ್ 2024 (13:11 IST)
ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬೆಳಕಿಗೆ ಚೆಲ್ಲುವ ಪೆನ್ ಡ್ರೈವ್ ಕೇಸ್ ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಕಾರು ಚಾಲಕನಾಗಿದ್ದ ಕಾರ್ತಿಕ್ ಮತ್ತು ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಹೆಸರು ಕೇಳಿಬಂದಿದೆ.

ಪ್ರಜ್ವಲ್ ಪೆನ್ ಡ್ರೈವ್ ಬಿಜೆಪಿ ನಾಯಕ ದೇವರಾಜೇಗೌಡರಿಗೆ ಸಿಕ್ಕಿತ್ತು. ಇದನ್ನು ಅವರು ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದರು ಎಂದು ಮಾಹಿತಿ ಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ದೇವರಾಜೇಗೌಡ ನನಗೆ ಪೆನ್ ಡ್ರೈವ್ ಸಿಗುವ ಮೊದಲು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಗೆ ನೀಡಿದ್ದ ಎಂದು ಆರೋಪಿಸಿದ್ದರು.

ಇದರ ಬೆನ್ನಲ್ಲೇ ಈಗ ಪತ್ರಿಕಾಗೋಷ್ಠಿ ನಡೆಸಿದ ಕಾರ್ತಿಕ್ ತನ್ನ ಮೇಲೆ ಆರೋಪ ಮಾಡಿರುವ ದೇವರಾಜೇಗೌಡಗೆ ತಿರುಗೇಟು ನೀಡಿದ್ದಾರೆ. ನಾನು ದೇವರಾಜೇಗೌಡ ಹೊರತಾಗಿ ಯಾರಿಗೂ ಪೆನ್ ಡ್ರೈವ್ ನೀಡಿಲ್ಲ. ನನ್ನ ಮೇಲೆ ಕಾಂಗ್ರೆಸ್ ನಾಯಕರಿಗೆ ಮೊದಲೇ ಪೆನ್ ಡ್ರೈವ್ ನೀಡಿದ್ದೆ ಎಂದು ದೇವರಾಜೇಗೌಡ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ನಾನು ರೇವಣ್ಣ ಮತ್ತು ಪ್ರಜ್ವಲ್ ಜೊತೆಗೆ 15 ವರ್ಷ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದೆ. ನನ್ನ ಮೇಲೆ ದೌರ್ಜನ್ಯ ನಡೆಸಿದ್ದರಿಂದ ವರ್ಷದ ಹಿಂದೆ ಕೆಲಸ ಬಿಟ್ಟಿದ್ದೆ. ನನ್ನ ಜಮೀನು ಬರೆಸಿಕೊಂಡು ಹೆಂಡತಿ ಮೇಲೆ ಹಲ್ಲೆ ನಡೆಸಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಹೋರಾಟ ಮಾಡಲು ಮುಂದಾಗಿದ್ದೆ. ನನ್ನ ಕೇಸ್ ವಾದಿಸಿಕೊಡುವಂತೆ ದೇವರಾಜೇಗೌಡ ಬಳಿ ಹೋಗಿದ್ದೆ. ಅವರು ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು. ಆದರೆ ಕೇಸ್ ತೆಗೆದುಕೊಳ್ಳಲಿಲ್ಲ.

ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದಾಗ ನನ್ನ ಕರೆಸಿ ಕೋರ್ಟ್ ಮೂಲಕ ಹೋದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದು ಮಾಧ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೂ ನನ್ನ ಜೊತೆ ನಿಂತಿದ್ದರು. ಇದಾದ ಬಳಿಕ ಪ್ರಜ್ವಲ್ ನನ್ನ ವಿರುದ್ಧ ಸ್ಟೇ ತಂದರು. ನಾನು ಯಾವುದೇ ವಿಡಿಯೋ ಬಿಡುಗಡೆ ಮಾಡದಂತೆ ಸ್ಟೇ ತಂದರು. ಆಗ ತಡೆಯಾಜ್ಞೆ ಪ್ರತಿ ತೆಗೆದುಕೊಂಡು ದೇವರಾಜೇಗೌಡ ಬಳಿ ಹೋಗಿದ್ದೆ. ಅವರು ನನ್ನ ಬಳಿಯಿದ್ದ ವಿಡಿಯೋ ತಂದುಕೊಡುವಂತೆ ಕೇಳಿದರು.

ನಾನು ಒಂದು ಕಾಪಿ ಇಟ್ಟುಕೊಂಡು ಅವರನ್ನು ನಂಬಿ ವಿಡಿಯೋ ಕೊಟ್ಟೆ. ಇದನ್ನು ಯಾರಿಗೂ ತೋರಿಸಲ್ಲ ಜಡ್ಜ್ ಮುಂದೆ ಪ್ರಸ್ತುತಪಡಿಸುತ್ತೇನೆ ಎಂದಿದ್ದರು. ನಾನು ವಿಡಿಯೋ ಕೊಟ್ಟು ವಕಾಲತ್ ಪತ್ರಕ್ಕೆ ಸಹಿ ಹಾಕಿಸಿಕೊಂಡೆ. ಆದರೆ ತಿಂಗಳಾದರೂ ಅವರು ಕೇಸ್ ಮೂವ್ ಮಾಡಲಿಲ್ಲ. ನಾನು ಕೇಳಿದಾಗ ಸ್ವಲ್ಪ ಸಮಯ ಹೋಗಲಿ ಎಂದರು. ವಿಡಿಯೋ ಕೇಳಿದಾಗ ಆಮೇಲೆ ಕೊಡ್ತೀನಿ ಎಂದು ಸುಮ್ಮನಾಗಿಸಿದರು. ನಾನೂ ಸುಮ್ಮನಾದೆ. ಇತ್ತೀಚೆಗೆ ಅವರು ರೇವಣ್ಣ ಕುಟುಂಬದ ರಾಸಲೀಲೆ ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದರು. ಆಗ ನಾನು ಅವರ ಬಳಿ ಕೇಳಿದಾಗ ನಿನಗೂ ಇದಕ್ಕೂ ಸಂಬಂಧವಿಲ್ಲ ಸುಮ್ಮನಿರು ಎಂದರು.

ಈ ನಡುವೆ ದೇವರಾಜೇಗೌಡರು ಬಿಜೆಪಿ ಹೈಕಮಾಂಡ್ ಗೆ ಪ್ರಜ್ವಲ್ ಗೆ ಟಿಕೆಟ್ ಕೊಡದಂತೆ ಪತ್ರ ಬರೆದಿದ್ದರು. ಅದರ ಕಾಪಿಯನ್ನು ನನಗೂ ನೀಡಿ ಕೋರ್ಟ್ ನಲ್ಲಿ ಆಗದೇ ಇದ್ದರೆ ಇಲ್ಲಿ ನ್ಯಾಯ ಸಿಗುತ್ತದೆ ಎಂದಿದ್ದರು. ನಾನೂ ಸುಮ್ಮನಾದೆ. ಆದರೆ ಈಗ ಅವರು ಪತ್ರಿಕಾಗೋಷ್ಠಿಯಲ್ಲಿ ನಾನು ಮೊದಲು ಕಾಂಗ್ರೆಸ್ ನಾಯಕರಿಗೆ ಪೆನ್ ಡ್ರೈವ್ ಕೊಟ್ಟೆ ಎಂದಿದ್ದಾರೆ. ಅದಕ್ಕಾಗಿ ನಾನೀಗ ಮಾತನಾಡಲೇಬೇಕಾಯಿತು. ನಾನು ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ಕೇಸ್ ನಲ್ಲಿ ರೇವಣ್ಣ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಜೋಶಿ ಗಂಭೀರ ಆರೋಪ