Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ನಲ್ಲಿ ಮರೆಯಾದ ನೇಹಾ ಹತ್ಯೆ ಪ್ರಕರಣ

Prajwal Revanna

Krishnaveni K

ಬೆಂಗಳೂರು , ಮಂಗಳವಾರ, 30 ಏಪ್ರಿಲ್ 2024 (10:12 IST)
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನ ಗದ್ದಲವನ್ನು ರಾಜ್ಯ ಕಾಂಗ್ರೆಸ್ ಚೆನ್ನಾಗಿಯೇ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬಿಜೆಪಿ ಮತ್ತು ಜೆಡಿಎಸ್ ತಲೆತಗ್ಗಿಸುವಂತೆ ಮಾಡಿದೆ. ಇದು ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದಕ್ಕೆ ಬಿಜೆಪಿಯೂ ಕಳಂಕ ಮೆತ್ತಿಕೊಂಡಂತಾಗಿದೆ. ಜೆಡಿಎಸ್ ನಾಯಕ ಮಾಡಿದ ಕೆಲಸಕ್ಕೆ ಬಿಜೆಪಿಯೂ ಬೆತ್ತಲಾಗುವಂತೆ ಮಾಡಿದೆ. ಈ ಪ್ರಕರಣ ಜೆಡಿಎಸ್ ಗಿಂತ ಹೆಚ್ಚು ಬಿಜೆಪಿಗೆ ಹೆಚ್ಚು ನಷ್ಟವುಂಟು ಮಾಡಿದೆ ಎಂದರೂ ತಪ್ಪಾಗಲಾರದು.

ಯಾಕೆಂದರೆ ಪ್ರಜ್ವಲ್ ರೇವಣ್ಣ ಜೆಡಿಎಸ್ ಧುರೀಣ ಎಚ್ ಡಿ ದೇವೇಗೌಡರ ಮೊಮ್ಮಗ, ಜೆಡಿಎಸ್ ನ ಯುವ ನಾಯಕನೇ ಆದರೂ ಇತ್ತೀಚೆಗೆ ಆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಈಗ ವಿಪಕ್ಷಗಳ ಟಾರ್ಗೆಟ್ ಆಗಿದೆ. ಇದೂ ಸಾಲದೆಂಬಂತೆ ಪ್ರಜ್ವಲ್ ರೇವಣ್ಣ ವಿಡಿಯೋ ಹಗರಣದ ಬಗ್ಗೆ ಕೆಲವು ದಿನಗಳ ಹಿಂದೆಯೇ ಸುಳಿವು ಸಿಕ್ಕರೂ  ರಾಜ್ಯ ಬಿಜೆಪಿ ನಾಯಕರು ತಣ್ಣಗೆ ಕುಳಿತಿದ್ದರು ಎಂಬ ಆರೋಪ ಕೇಳಿಬಂದಿದೆ.

ಎಲ್ಲಾ ಗೊತ್ತಿದ್ದರೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಈಗ ತಕ್ಕ ಬೆಲೆ ತೆತ್ತಿದೆ. ರಾಜ್ಯ ನಾಯಕರ ಜೊತೆಗೆ ಬಿಜೆಪಿಯ ರಾಷ್ಟ್ರ ನಾಯಕರೂ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅಂತೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ತಪ್ಪಿಗೆ ಈ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತಕ್ಕ ಫಲ ಅನುಭವಿಸುತ್ತಿದೆ.

ರಾಜಕೀಯ ಎಂದರೆ ಹಾಗೆಯೇ ಅಲ್ಲವೇ? ಒಬ್ಬರ ನಷ್ಟ ಇನ್ನೊಬ್ಬರಿಗೆ ಲಾಭ ಎನ್ನುವಂತೆ. ಹುಬ್ಬಳ್ಳಿಯಲ್ಲಿ ನಡೆದಿದ್ದ ನೇಹಾ ಕೊಲೆ ಪ್ರಕರಣ, ಸ್ಯಾಮ್ ಪಿತ್ರೋಡಾ ಅವರ ಪಿತ್ರಾರ್ಜಿತ ಆಸ್ತಿ ತೆರಿಗೆ ಹೇಳಿಕೆ ಕಾಂಗ್ರೆಸ್ ಗೆ ತೀವ್ರ ಹೊಡೆತ ನೀಡಿತ್ತು. ಇದೇ ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರಿತ್ತು. ಕಾಂಗ್ರೆಸ್ ಆಳ್ವಿಕೆಯಲ್ಲಿ ಜನರಿಗೆ ರಕ್ಷಣೆಯಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಗೇ ಕುತ್ತು ತರುತ್ತದೆ ಎಂದು ಬಿಜೆಪಿ ಪ್ರಹಾರ ನಡೆಸುತ್ತಿತ್ತು.

ಇದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿತ್ತು. ಈ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಈಗ ಪೆನ್ ಡ್ರೈವ್ ಸರಿಯಾಗಿಯೇ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಿಂದಾಗಿ ಈಗ ಜನರು ನೇಹಾ ಹತ್ಯೆ ಪ್ರಕರಣ, ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರಕ್ಕೆ ಎಳ್ಳು ನೀರು ಬಿಡುವಂತೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಯಶಸ್ವಿಯಾಗಿದೆ. ರಾಜಕೀಯ ಎಂದರೆ ಚದುರಂಗದಾಟ ಎಂದು ಸುಮ್ಮನೇ ಹೇಳುತ್ತಾರಾ? ಒಮ್ಮೆ ಬಿಜೆಪಿ ಮೇಲುಗೈ ಸಾಧಿಸಿದರೆ ಇನ್ನೊಮ್ಮೆ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿದೆ. ಒಟ್ಟಾರೆ ಈ ಲೋಕಸಭೆ ಚುನಾವಣೆ ಮುಗಿಯುವವರೆಗೂ ಒಬ್ಬರ ಕಾಲೆಳೆಯಲು ಮತ್ತೊಬ್ಬರಿಗೆ ಎಲ್ಲಿ ಅವಕಾಶ ಸಿಗುತ್‍ತದೆ ಎಂದು ಕಾದುನೋಡುತ್ತಲೇ ಇರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣನಿಂದಾಗಿ ಒಡೆದ ಮನೆಯಾದ ದೇವೇಗೌಡರ ಕುಟುಂಬ