ಮಂಗಳೂರು: ನಾಗರ ಪಂಚಮಿ, ನಾಗದೇವತೆಗಳನ್ನು ಪೂಜಿಸಲು ಮೀಸಲಾಗಿರುವ ವಿಶೇಷವಾದ ದಿನವಾಗಿದೆ. ಇದು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು (ಐದನೇ ದಿನ) ಆಚರಿಸಲಾಗುತ್ತದೆ.
ಜುಲೈ 29ರಂದು ನಾಳೆ ದೇಶದಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಾಧನೆಗೂ ಕರಾವಳಿ ಪ್ರದೇಶಕ್ಕೂ ವಿಶೇಷವಾದ ನಂಟಿರುವುದರಿಂದ ಇಲ್ಲಿನ ಪವಿತ್ರ ಕ್ಷೇತ್ರಗಳಲ್ಲಿ ನಾಳೆ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿಯನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬ ಹಿಂದೂ ಕೂಡಾ ಈ ಹಬ್ಬವನ್ನು ಆಚರಿಸುತ್ತಾರೆ. ಇನ್ನೂ ಜಾತಕದಲ್ಲಿ ನಾಗ ದೋಷ ಹೆಚ್ಚಿರುವವರು ಈ ದಿನದಂದು ವಿಶೇಷ ಆರಾಧನೆ ಮಾಡುವ ಮೂಲಕ, ತನ್ನ ಬದುಕಿನಲ್ಲಿ ಬರುವ ನಾಗದೋಷವನ್ನು ದೂರ ಮಾಡಬಹುದೆಂಬ ನಂಬಿಕೆಯೂ ಇದೆ.
ಭಾರತದ ಅತ್ಯಂತ ಪವಿತ್ರ ನಾಗಾರಾಧನೆ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸಹಿತ ಕರಾವಳಿಯ ಪ್ರತೀ ನಾಗಾರಾಧನೆ ಕ್ಷೇತ್ರದಲ್ಲೂ ನಾಳೆ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ.
ಕರಾವಳಿಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಹಾಗೂ ದೇವಸ್ಥಾನಗಳಲ್ಲಿ ತಂಬಿಲ ಸೇವೆಗಳನ್ನು ನಡೆಸಲಾಗುತ್ತೆ. ಅದಲ್ಲದೆ ವ್ಯಕ್ತಿಯ ಮೂಲ ಮನೆಯ ನಾಗನ ಬನದಲ್ಲೂ ನಾಳೆ ನಾಗತಂಬಿಲ ನೆರವೇರುತ್ತದೆ. ಅಲ್ಲಿ ತಂಬಿಲ ಸೇವೆಯನ್ನು ಮಾಡುವುದರಿಂದ ನಾಗ ದೋಷ ದೂರವಾಗುತ್ತದೆ ಎನ್ನುತ್ತಾರೆ.