Select Your Language

Notifications

webdunia
webdunia
webdunia
webdunia

ಶೋಷಿತರನ್ನು ಮತಬ್ಯಾಂಕ್ ಮಾಡಿ ವಂಚಿಸುತ್ತ ಬಂದ ಕಾಂಗ್ರೆಸ್ ಪಕ್ಷ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಸೋಮವಾರ, 28 ಜುಲೈ 2025 (16:41 IST)
ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಳೆದ ಎರಡೂವರೆ ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ. 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಸರಕಾರವು ಶೋಷಿತ ಸಮುದಾಯವನ್ನು ಮತಬ್ಯಾಂಕಾಗಿ ಬಳಸಿಕೊಳ್ಳುತ್ತಿದೆ. ಆ ಸಮುದಾಯಗಳಿಗೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ವಂಚನೆ ಮಾಡುತ್ತ ಬಂದಿದೆ ಎಂದು ಆಕ್ಷೇಪಿಸಿದರು.

ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿಚಾರಗಳಿಗೆ ಬಳಸಿಕೊಳ್ಳಬೇಕಾದ ಅನುದಾನವನ್ನು ಗ್ಯಾರಂಟಿಗಳಿಗೆ ವರ್ಗಾವಣೆ ಮಾಡಿ, ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಇದರ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿದೆ; ಸದನದ ಒಳಗೆ ಮತ್ತು ಹೊರಗಡೆ ಹೋರಾಟ ನಡೆಸಲಾಗಿದೆ ಎಂದು ವಿವರಿಸಿದರು.

ಸಿದ್ದರಾಮಯ್ಯನವರು ಈಗಲೂ ಶೋಷಿತ ಸಮುದಾಯಗಳನ್ನು ವಂಚಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ. 2025-26ರಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 11,896 ಕೋಟಿ ರೂ.ಗಳನ್ನು ಮತ್ತೊಮ್ಮೆ ಇತರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ್ದಾರೆ. ಈ ಮೂಲಕ ಈ ಸಮುದಾಯಗಳಿಗೆ ವಂಚಿಸುತ್ತಿದ್ದಾರೆ ಎಂದು ಟೀಕಿಸಿದರು. 
 
ಈ ಕುರಿತು ಸದನದಲ್ಲಿ ಚರ್ಚೆ ಮಾಡಲಿದ್ದೇವೆ; ಸರಕಾರದ ಕಿವಿ ಹಿಂಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ತಲುಪಬೇಕೆಂದು ಹಾಗೂ ನ್ಯಾಯ ಸಿಗಬೇಕೆಂದು ಬಿಜೆಪಿ ನಂಬಿದೆ. ಇದೇ ನಿಟ್ಟಿನಲ್ಲಿ ಬಿಜೆಪಿ ಬಲವಾದ ಹೋರಾಟ ಸಂಘಟಿಸಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಕರ್ತವ್ಯ ಮಾಡಲಿದೆ ಎಂದು ನುಡಿದರು.
 
ಹಿಂದುಳಿದ ವರ್ಗ, ಸಮುದಾಯದ ಕುರಿತು ಮೊಸಳೆಕಣ್ಣೀರು ಸುರಿಸುವ ಕಾಂಗ್ರೆಸ್ ಮುಖಂಡರು ಅಹಿಂದವನ್ನು ಮುಂದಿಟ್ಟುಕೊಂಡು, ರಾಜ್ಯದ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬಂದಿದ್ದಾರೆ. ಅದರ ನೇತೃತ್ವ ಸಿದ್ದರಾಮಯ್ಯನವರದು. ಅವರ ನೇತೃತ್ವದಲ್ಲೇ ಅನ್ಯಾಯ ಆಗುತ್ತಿದ್ದು ಅದನ್ನು ನಾವು ಪ್ರಶ್ನಿಸುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
 
ಮತಬ್ಯಾಂಕಾಗಿ ಶೋಷಿತ ಸಮುದಾಯಗಳ ಬಳಕೆ
ನಿನ್ನೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಹಳ ನೋವಿನಿಂದ ಅವರ ಮನದಾಳದ ಮಾತನ್ನು ರಾಜ್ಯದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 40-50 ವರ್ಷಗಳಿಂದ ಹೋರಾಟ ಮಾಡುತ್ತ ಬಂದು ಪಕ್ಷ ಸಂಘಟಿಸಿದರೂ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾಗಿ ವಿವರಿಸಿದರು.

ಗಾಂಧಿ ಕುಟುಂಬ, ಕಾಂಗ್ರೆಸ್ ಪಕ್ಷ ಅಥವಾ ಸಿದ್ದರಾಮಯ್ಯನವರು ಹೇಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡುತ್ತ ಬರುತ್ತಿವೆ ಎಂಬುದನ್ನು ಖರ್ಗೆಯವರು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈಗಲಾದರೂ ಖರ್ಗೆಯವರ ಮಾತನ್ನು ಗಂಭೀರವಾಗಿ ಪರಿಗಣಿಸಲಿದೆಯೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ- ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡಿ ಆ ಸಮುದಾಯಗಳಿಗೆ ವಂಚನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದಲ್ಲಿ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುತ್ತಿಲ್ಲ; ಸ್ವಾತಂತ್ರ್ಯಾನಂತರ ತಮ್ಮ ಸಮುದಾಯಗಳನ್ನು ಮತಬ್ಯಾಂಕಾಗಿ ದುರ್ಬಳಕೆ ಮಾಡುತ್ತಿದ್ದಾರೆಯೇ ಹೊರತು ನ್ಯಾಯ ಸಿಗುತ್ತಿಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದು, ಆ ವಿಷಯವನ್ನು ಎಲ್ಲರೂ ಗಮನಿಸಿದ್ದಾರೆ ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಶಿಕಾರಿಪುರ ಸೇರಿದಂತೆ ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚುನಾವಣೆ ಬಂದಾಗ ತೀರ್ಮಾನ ಆಗಲಿದೆ. ಇವತ್ತು ನಾನಾಗಲೀ, ಯಾರೇ ಇದ್ದರೂ ಅದರ ಕುರಿತು ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ, ಪ್ರಮುಖರು ಉಪಸ್ಥಿತರಿದ್ದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

Video: ಆಪರೇಷನ್ ಸಿಂಧೂರ್ ಚರ್ಚೆ ವೇಳೆ ಸಂಸತ್ತಿನಲ್ಲಿ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ವಾಗ್ಯುದ್ಧ