Select Your Language

Notifications

webdunia
webdunia
webdunia
webdunia

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಶನಿವಾರ, 26 ಜುಲೈ 2025 (15:09 IST)
ಬೆಂಗಳೂರು: ರಾಜ್ಯ ಸರಕಾರವು ರಸಗೊಬ್ಬರ ವಿಚಾರದಲ್ಲಿ ಪೂರ್ವತಯಾರಿ ಮಾಡಿಲ್ಲ. ತೊಗರಿ ಬೆಳೆಯುವ ಗುಲ್ಬರ್ಗ, ಬೇರೆ ಬೇರೆ ಬೆಳೆ ಬೆಳೆಯುವ ಗದಗ, ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಬೇಕೆಂಬ ಪೂರ್ವಾಪರ ಲೆಕ್ಕಾಚಾರ ಇಲ್ಲದೇ ರೈತರಿಗೆ ಆತಂಕದ ಸ್ಥಿತಿ ಉಂಟಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ. 
 
ಇಲ್ಲಿ ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಅವರು, ದುಪ್ಪಟ್ಟು ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟವಾಗುತ್ತಿದೆ. ಕಳ್ಳದಂಧೆಯೂ ನಡೆಯುತ್ತಿದೆ. ಕಾಂಗ್ರೆಸ್ ಸರಕಾರ ಇದ್ದಲ್ಲೆಲ್ಲ ದಲ್ಲಾಳಿಗಳ ಕಾಟವನ್ನು ಹಿಂದಿನಿಂದಲೂ ನೋಡುತ್ತ ಬಂದಿದ್ದೇವೆ. ರಸಗೊಬ್ಬರದ ವಿಷಯದಲ್ಲಿ ಕೃತಕ ಅಭಾವ ಸೃಷ್ಟಿ ಆಗಿದೆ ಎಂದು ದೂರಿದರು. ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಇದರ
ಸಂಬಂಧ ಬಿಜೆಪಿ ಹೋರಾಟ ಮಾಡಲಿದೆ ಎಂದು ಪ್ರಕಟಿಸಿದರು.

ರಸಗೊಬ್ಬರ ದಾಸ್ತಾನಿದೆ; ಕೊರತೆ ಇಲ್ಲ ಎಂದು ಕೃಷಿ ಸಚಿವರು ಮೊನ್ನೆ ಹೇಳಿದ್ದಾರೆ. ಹಾಗಿದ್ದೂ ರೈತರ ಹೋರಾಟ ಮುಂದುವರೆದಿದ್ದರೆ, ಇದರ ಹಿಂದೆ ರಾಜ್ಯ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ತಿಳಿಸಿದರು. ರೈತರಿಗೆ ತೊಂದರೆ ಆಗದ ರೀತಿಯಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿಯವರು ನಿನ್ನೆ ರಾಜ್ಯದ ರಸಗೊಬ್ಬರ ಸಂಬಂಧ ಕೇಂದ್ರ ಸಚಿವ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಈ ಬಾರಿ ಮುಂಗಾರು 20-25 ದಿನಗಳ ಮುಂಚಿತವಾಗಿ ಪ್ರಾರಂಭವಾಗಿದೆ. ಹವಾಮಾನ ಇಲಾಖೆ ಇದರ ಸ್ಪಷ್ಟ ಮುನ್ಸೂಚನೆ ನೀಡಿದ್ದರೂ ರಾಜ್ಯ ಸರಕಾರ, ಕೃಷಿ ಸಚಿವರು ಪೂರ್ವ ತಯಾರಿ ಮಾಡದ ಕಾರಣ ರೈತರು ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ. ಗುಲ್ಬರ್ಗ, ಗದಗ, ಕೊಪ್ಪಳ, ದಾವಣಗೆರೆ ಮೊದಲಾದ ಕಡೆಯಲ್ಲಿ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿಗಳು ಕೇಂದ್ರ ಸರಕಾರ ಸಹಕರಿಸುತ್ತಿಲ್ಲ ಎಂದಿದ್ದಾರೆ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
 
ಜುಲೈ ಅಂತ್ಯಕ್ಕೆ ಕೇಂದ್ರದಿಂದ 8,73,000 ಮೆಟ್ರಿಕ್ ಟನ್ ರಸಗೊಬ್ಬರ ರಾಜ್ಯಕ್ಕೆ ಬಂದಿದೆ. ನಮ್ಮ ನಿರೀಕ್ಷೆ ಇದ್ದುದು 6,31,000 ಮೆ.ಟನ್. ರಾಜ್ಯ ಸರಕಾರದ ಅಪೇಕ್ಷೆ ಮೀರಿ ರಸಗೊಬ್ಬರ ರಾಜ್ಯಕ್ಕೆ ಬಂದಿದೆ ಎಂದು ಗಮನ ಸೆಳೆದರು.
 
ಬೆಂಗಳೂರಿನ ಸಮಸ್ಯೆಗಳ ಚರ್ಚೆ
ಬೆಂಗಳೂರು ಮಹಾನಗರದ ಬಿಜೆಪಿಯ ಎಲ್ಲ ಹಿರಿಯ ಶಾಸಕರು ಕುಳಿತು ಈ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಇದ್ದರೂ ನಗರದ ಅಭಿವೃದ್ಧಿ ವಿಚಾರದಲ್ಲಿ ವೈಜ್ಞಾನಿಕವಾಗಿ ಆಲೋಚಿಸಿಲ್ಲ; ಭೂಗತ ಟನೆಲ್ ರಸ್ತೆ, ಬಿಬಿಎಂಪಿಯನ್ನು 5 ವಿಭಾಗವಾಗಿ ಮಾಡುವ ಅವೈಜ್ಞಾನಿಕ ತೀರ್ಮಾನವು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದು ಟೀಕಿಸಿದರು.
ಬೆಂಗಳೂರು ಮಹಾನಗರವನ್ನು 5 ವಿಭಾಗವಾಗಿ ಮಾಡುವ ಮೂಲಕ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಇದು ನಿಶ್ಚಿತವಾಗಿ ಅಭಿವೃದ್ಧಿಗೆ ಪೂರಕವಲ್ಲ ಎಂದು ಆಕ್ಷೇಪಿಸಿದರು. ಮುಂಬೈ ಮತ್ತಿತರ ಮಹಾನಗರಗಳಲ್ಲಿ ಇಂಥ ಪ್ರಯೋಗ ಮಾಡಿ ಅವೆಲ್ಲವೂ ವಿಫಲವಾಗಿವೆ ಎಂದು ಗಮನ ಸೆಳೆದರು. ಬಿಜೆಪಿ ಇದನ್ನು ಹಿಂದೆ ವಿರೋಧಿಸಿದ್ದು, ಇಂದು ಮತ್ತು ಮುಂದೆಯೂ ವಿರೋಧಿಸಲಿದೆ ಎಂದು ಹೇಳಿದರು.
 
ಭೂಗತ ಟನೆಲ್ ರಸ್ತೆಯ ಸಾಧಕ ಬಾಧಕವನ್ನು ಚರ್ಚೆ ಮಾಡದೆ, ಆತುರಾತುರವಾಗಿ ಟೆಂಡರ್ ಕರೆಯಲು ಹೊರಟಿದ್ದು ಖಂಡಿತ ಸರಿಯಲ್ಲ; ಬ್ಲ್ಯಾಕ್ ಲಿಸ್ಟ್ ಆದ ಕಂಪೆನಿಗಳನ್ನು ಸೇರಿಸಿಕೊಂಡು ಆತುರದಿಂದ ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಹೊರಟಿದ್ದು, ಇದರ ಹಿಂದೆ ಅಭಿವೃದ್ಧಿಯ ಚಿಂತನೆ ಇದೆಯೇ ಅಥವಾ ಬೇರೆ ಆಲೋಚನೆಗಳಿದೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಸಾವಿರಾರು ಮನೆಗಳಿಗೆ ಎನ್‍ಒಸಿ ಸಿಗದೆ ಗೃಹ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಕುರಿತು ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಅªರಾಗಲೀ ಚಿಂತಿಸುತ್ತಿಲ್ಲ ಎಂದು ದೂರಿದರು.
 
ಪುಣ್ಯಾತ್ಮರಿಗೆ ತುಲನೆ ಮಾಡದಿರಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಿಂತ ಸಿದ್ದರಾಮಯ್ಯ ಅವರ ಕೊಡುಗೆ ದೊಡ್ಡದು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದರು. ಅಂಥ ಪುಣ್ಯಾತ್ಮರಿಗೆ ತುಲನೆ ಮಾಡಿ ಅವರಿಗೂ ಅಪಮಾನ ಮಾಡುವ ಕೆಲಸ ಮಾಡಬಾರದು. ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ರಾಜ್ಯದ ಜನರು ನೋಡಿದ್ದಾರೆ. ಹುಚ್ಚು ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಅಟ್ಟಕ್ಕೇರಿಸುವ ಕೆಲಸ ಮಾಡುತ್ತಾರೆ. ಅದರಿಂದ ಅವರಿಗೂ ಪ್ರಯೋಜನ ಇಲ್ಲ; ರಾಜ್ಯಕ್ಕೂ ಪ್ರಯೋಜನ ಇಲ್ಲ ಎಂದು ನುಡಿದರು. ವಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಶಾಸಕರು, ಮುಖಂಡರು ಇದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ