ಮೊಳಕಾಲ್ಮೂರು ಬಂಡಾಯ ಶಮನ ಯಶಸ್ವಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಪೋಸ್ಟ್ ಹಾಕಿದ್ದು, ಇದು ಶುದ್ದ ಸುಳ್ಳೆಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಸುಳ್ಳು ಸುದ್ದಿ ಪ್ರಚಾರ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಮಾಜಿ ಶಾಸಕ N.Y. ಗೋಪಾಲಕೃಷ್ಣಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದೆ ನೊಂದಿದ್ದ ಯೋಗೇಶ್ ಬಾಬು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಯೋಗೇಶ್ ಬಾಬು ಅವರೊಂದಿಗೆ ಯಶಸ್ವಿ ಸಂಧಾನ ಮಾತುಕತೆ ನಡೆಸಲಾಯಿತು.. ಅವರ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಸಂತೈಸಲಾಯಿತು ಎಂದು ಡಿಕೆಶಿ ಪೋಸ್ಟ್ ಹಾಕಿದ್ದರು. ಜೊತೆಗೆ ಬಾಬು ಅವರೊಂದಿಗಿನ ಫೋಟೋ ಕೂಡ ಹಂಚಿಕೊಂಡಿದ್ದರು. ಆದರೆ ಇದು ಸುಳ್ಳು ಎಂದು ಯೋಗೇಶ್ ಬಾಬು ಹೇಳಿದ್ದಾರೆ. ಬೇರೊಂದು ವಿಚಾರದ ಚರ್ಚೆಗೆಂದು ಡಿಕೆಶಿ ಕರೆದಿದ್ದರು. ಸಂಧಾನ ಯಶಸ್ವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ.. ಇದೆಲ್ಲ ಸುಳ್ಳು, ಗ್ರಾಮ ಪಂಚಾಯಿತಿವಾರು ಅಭಿಪ್ರಾಯ ಕೇಳುತ್ತಿದ್ದೇನೆ. ಮೊಳಕಾಲ್ಮೂರಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಬಾಬು ಸ್ಪಷ್ಟಪಡಿಸಿದ್ದಾರೆ.