Publish Date: Sat, 02 Feb 2019 (14:38 IST)
Updated Date: Sat, 02 Feb 2019 (14:47 IST)
ಕತ್ತಲ ರಾತ್ರಿಯಲ್ಲಿ ಮಾಡಬಾರದ್ದನ್ನು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಭೂಪನನ್ನು ಕಂಬಕ್ಕೆ ಕಟ್ಟಿ ಜನರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ಅಡಿಕೆ ಕದಿಯಲು ಬಂದ ಯುವಕರನ್ನು ರೈತರು ಹಿಡಿದು ಕಂಬಕ್ಕೆ ಕಟ್ಟಿದ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.
ಕಳೆದ ಆರು ತಿಂಗಳಿನಿಂದ ಬೂಕನಕೆರೆ ಗ್ರಾಮದ ಸುತ್ತಮುತ್ತಲಿನ ಅಡಿಕೆ ತೋಟಗಳು ಹಾಗೂ ಅಡಿಕೆ ಗೋದಾಮಿನಲ್ಲಿ ಕಳ್ಳತನ ಮಾಡುತ್ತಿದ್ದ ಯುವಕರು, ಗ್ರಾಮಸ್ಥರ ನಿದ್ದೆಗೆಡಿಸಿದ್ದರು. ಹೊಸಹೊಳಲು ಗ್ರಾಮದ ಚಂದು ತನ್ನ ಸ್ನೇಹಿತರಾದ ಹೇಮಂತ, ಅಶೋಕ, ಗುಂಡ ಅವರೊಂದಿಗೆ ಎರಡು ಬೈಕುಗಳು ಹಾಗೂ ಒಂದು ಆಫೆ ಆಟೋವನ್ನು ತೆಗೆದುಕೊಂಡು ಬಂದು ಕಳ್ಳತನ ಮಾಡುತ್ತಿದ್ದ.
ಅಡಿಕೆ ಗೋದಾಮಿನಲ್ಲಿ ತಡರಾತ್ರಿ ಸದ್ದು ಕೇಳಿಸಿದ ಹಿನ್ನೆಲೆಯಲ್ಲಿ ನಿದ್ರೆಯಿಂದ ಎಚ್ಚೆತ್ತ ವೀರೇಶ್ ಮತ್ತು ಸತೀಶ್ ಕಳ್ಳತನ ಮಾಡುತ್ತಿದ್ದ ಚಂದು(25)ವನ್ನು ಹಿಡಿದರು. ಇನ್ನು ಮೂವರು ಕತ್ತಲಿನಲ್ಲಿ ಓಡಿ ನಾಪತ್ತೆಯಾದರು. ಕಳೆದ ಎರಡು ಬಾರಿ ಕಳ್ಳತನ ನಡೆಸಿ ಚಾಕಚಕ್ಯತೆ ಪ್ರದರ್ಶಿಸಿದ್ದ ಕಳ್ಳರು, ಮೂರನೇ ಬಾರಿ ಕಳ್ಳತನ ಮಾಡಲು ಬಂದಿದ್ದಾಗ ಸಿಕ್ಕಿಬಿದ್ದಿದ್ದಾರೆ. ಹೊಸಹೊಳಲು ಗ್ರಾಮದ ಯುವಕ ಚಂದುನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಬೂಕನಕೆರೆ ಗ್ರಾಮಸ್ಥರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.