ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಐದು ಹುಲಿಗಳು ಮೃತಪಟ್ಟ ಕಹಿಸುದ್ದಿ ಮಾಸುವ ಮುನ್ನವೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ಹುಲಿಮರಿಗಳು ಸಾವನ್ನಪ್ಪಿವೆ.
ಹಿಮಾದಾಸ್ ಹುಲಿಯು ಜುಲೈ 7 ರಂದು ಮೂರು ಮರಿಗಳಿಗೆ ಜನ್ಮ ನೀಡಿತು. ಆದರೆ, ಅದು ತನ್ನ ಮರಿಗಳನ್ನು ನೋಡಿಕೊಳ್ಳಲಿಲ್ಲ. ತಾಯಿ ಹುಲಿಯ ನಿರ್ಲಕ್ಷ್ಯದ ಪರಿಣಾಮವಾಗಿ, ಮೂರು ಮರಿಗಳು ಗಾಯಗೊಂಡಿದ್ದವು.
ಮರಿಗಳನ್ನು ತೀವ್ರ ನಿಗಾ ಮತ್ತು ಕೈ ಆರೈಕೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಪ್ರಯತ್ನಗಳ ಹೊರತಾಗಿಯೂ, ಮರಿಗಳು ಸಾವಿಗೀಡಾಗಿವೆ. ಜುಲೈ 8 ರಂದು ಒಂದು ಗಂಡು ಮರಿ ಸಾವಿಗೀಡಾಯಿತು ಮತ್ತು ಜುಲೈ 9 ರಂದು ಮತ್ತೊಂದು ಗಂಡು ಮರಿ ಮತ್ತು ಒಂದು ಹೆಣ್ಣು ಮರಿ ಮೃತಪಟ್ಟಿತು.
ಇಡೀ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಪ್ರಾಣಿ ಪಾಲಕರು ಮತ್ತು ವೈದ್ಯರು ತಾಯಿ ಮತ್ತು ಮರಿಗಳಿಗೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ಅರಣ್ಯ ವಲಯದಲ್ಲಿ ಜೂನ್ 26 ರಂದು ಹೆಣ್ಣು ಹುಲಿ ಮತ್ತು ಅದರ ನಾಲ್ಕು ಮರಿಗಳು ಸಾವಿಗೀಡಾಗಿದ್ದ ಬೆನ್ನಲ್ಲೇ ಈ ಕಹಿಘಟನೆ ನಡೆದಿದೆ.