ಮಧುಗಿರಿ: ನನ್ನನ್ನು ಸಚಿವ ಸ್ಥಾನದಿಂದ ಇಳಿಸಲು ಮೂವರು ದೆಹಲಿಯಲ್ಲಿ ವ್ಯವಸ್ಥಿತವಾಗಿ ಸಂಚನ್ನು ರೂಪಿಸಿರುವುದಾಗಿ ಸಚಿವ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರೀ ಕೆಎಸ್ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿತೂರಿ ಮಾಡುವುದು ನನಗೂ ಬರುತ್ತದೆ. ಪಿತೂರಿ ವಿದ್ಯೆ ಬರುವುದಿಲ್ಲ ಅಂದುಕೊಳ್ಳಬೇಕಿಲ್ಲ ಎಂದು ಕೌಂಟರ್ ನೀಡಿದರು.
ನನ್ನನ್ನು ಸಚಿವ ಸ್ಥಾನದಿಂದ ಇಳಿಸಲು ಮೂವರು ದೆಹಲಿಯಲ್ಲಿ ವ್ಯವಸ್ಥಿತವಾಗಿ ಪಿತೂರಿ ಮಾಡಿದ್ದಾರೆ. ಪಿತೂರಿ ವಿದ್ಯೆ ನನಗೂ ಗೊತ್ತಿದೆ. ಈ ಸಂದರ್ಭದಲ್ಲಿ ಅದನ್ನು ಬಳಸುವುದಿಲ್ಲ. ಮುಂದೆ ಕಾಲ ಬರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ವಿಧಾನಸಭೆ ಅಧಿವೇಶನ ಮುಗಿದ ನಂತರ ದೆಹಲಿಯಲ್ಲಿರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುತ್ತೇನೆ. ಅವರಿಗೆ ಎಲ್ಲ ವಿಚಾರ ತಿಳಿಸಿ, ಸಮಯ ಬಂದಾಗ ಸಚಿವ ಸ್ಥಾನ ತೆಗೆದುಕೊಳ್ಳುತ್ತೇನೆ. ಇದೇ ಅವಧಿಯಲ್ಲಿ ಸಚಿವನಾಗುತ್ತೇನೆ. ಹೈಕಮಾಂಡ್ ಒಪ್ಪಿಸುತ್ತೇನೆ. ದೆಹಲಿಗೆ ಹೋಗಿ ಬಂದ ಮೇಲೆ ಸಿಹಿ ಸುದ್ದಿ ಕೊಡುತ್ತೇನೆ ಎಂದರು.