Publish Date: Wed, 20 Sep 2017 (12:46 IST)
Updated Date: Wed, 20 Sep 2017 (12:50 IST)
ಬೆಂಗಳೂರು: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿಯ ಸಿಇಒ ಮನೆಯಲ್ಲಿ, ಕೆಲಸಗಾರರೇ ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ಕಳವು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಲ್ಯಾವೆಲ್ಲ ರೋಡ್ ನಲ್ಲಿರುವ Myntra.com ಸಿಇಒ ಅನಂತ್ ನಾರಾಯಣ್ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೆ.6 ರಂದು ಮನೆಯಲ್ಲಿ ಕಳುವಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬರೋಬ್ಬರಿ 1 ಕೋಟಿ ಮೌಲ್ಯದ ಡೈಮಂಡ್ ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಮನೆಯ ಕೆಲಸದಾಕೆ ಭವಾನಿ ಮತ್ತು ಕಾರು ಚಾಲಕ ಸುರೇಶ್ ಸಹಚರರು ಈ ಕೃತ್ಯವೆಸಗಿದ್ದಾರೆ. ಭವಾನಿ ಮತ್ತು ಸುರೇಶ್ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಸಹ ಮದುವೆಯಾಗುವ ನಿರ್ಧಾರ ಮಾಡಿದ್ದರು. ಮದುವೆ ನಂತರ ಐಷಾರಾಮಿ ಜೀವನ ನಡೆಸಲು ನಿರ್ಧರಿಸಿದ್ದರು. ಹೀಗಾಗಿ ನಾರಾಯಣ್ ಕುಟುಂಬ ವಿದೇಶಕ್ಕೆ ತೆರಳುವುದು ಮೊದಲೇ ತಿಳಿದಿದ್ದ ಭವಾನಿ, ನಾರಾಯಣ್ ಪತ್ನಿ ಪರ್ಸ್ ನಿಂದ ಲಾಕರ್ ಕೀ ಕದ್ದು ತೆಗೆದುಕೊಂಡಿದ್ದಳು. ಸದ್ಯ ಆರೋಪಿ ಭವಾನಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾಳೆ.
ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 6ನೇ ತಾರೀಖಿನಂದು ಪ್ರಕರಣ ದಾಖಲಾಗಿತ್ತು. ಭವಾನಿ ಪ್ರಿಯಕರ ತಮಿಳುನಾಡು ಮೂಲದ ಸುರೇಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.