ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಪ್ರಮಾಣ ನಿಗದಿಯಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಪ್ರಸಕ್ತ ಇರುವ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕೆಂದು ಬಹಳ ದಿನಗಳಿಂದ ಒತ್ತಾಯಿಸಲಾಗುತ್ತಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ, ಆಗಿನ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರು ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚನೆ ಮಾಡಿದ್ದರು. ಆ ಸಮಿತಿ ವರದಿ ಕೊಟ್ಟು 2 ವರ್ಷ 3 ತಿಂಗಳಾಗಿವೆ. ಇದುವರೆಗೆ ಸರ್ಕಾರ ಅದರ ಬಗ್ಗೆ ಕ್ರಮಕೈಗೊಂಡಿರಲಿಲ್ಲ. ಕೊನೆಗೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿದ್ದರಿಂದ ಈಗ ಸರ್ಕಾರ ಮೀಸಲು ಪ್ರಮಾಣ ಹೆಚ್ಚಳಕ್ಕೆ ಮುಂದಾಗಿದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇರುವುದರಿಂದ ಅವರು ಈಗ ಆಸಕ್ತಿ ವಹಿಸಿ, ಸಂವಿಧಾನ ತಿದ್ದುಪಡಿ ಮಾಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.