Publish Date: Sat, 07 Sep 2019 (18:14 IST)
Updated Date: Sat, 07 Sep 2019 (18:15 IST)
ದನಗಳ ಜತೆ ತೆರಳಿದಾಗ ನಡೆಯಬಾರದ ಘಟನೆ ನಡೆದುಹೋಗಿದೆ.
ಮಂಡ್ಯ ಜಿಲ್ಲೆಯ ದೊಡ್ಡಗಾಡಿಗನಹಳ್ಳಿ ಗ್ರಾಮದ ತನ್ನ ಜಮೀನಿನ ಬಳಿ ಉಳುಮೆ ಮಾಡಿ ನಂತರ ದನಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದ ಯುವರೈತನೊಬ್ಬ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ದೊಡ್ಡಗಾಡಿಗನಹಳ್ಳಿ ಗ್ರಾಮದ ರಂಗೇಗೌಡರ ಮಗ ಡಿ.ಆರ್.ಕಾರ್ತಿಕ್(23) ಮೃತ ಯುವ ರೈತನಾಗಿದ್ದಾನೆ.
ಕಾರ್ತೀಕ್ ಬೆಳಿಗ್ಗೆ 6 ಗಂಟೆಗೆ ತಮ್ಮ ದನಗಳೊಂದಿಗೆ ಜಮೀನನ್ನು ಉಳುಮೆ ಮಾಡಲು ಹೋಗಿದ್ದಾನೆ. ಉಳುಮೆಯ ನಂತರ ದನಗಳಿಗೆ ನೀರು ಕುಡಿಸಿ ಮೈತೊಳೆಯುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹೀಗಂತ ಮೃತನ ತಂದೆ ರಂಗೇಗೌಡ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿರುವ ಪ್ರಭಾರ ಸಬ್ ಇನ್ಸ್ ಪೆಕ್ಟರ್ ಈರೇಗೌಡ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಶೋಕ್, ರೈತ ಸಂಜೀವಿನಿ ಯೋಜನೆ ಅಡಿಯಲ್ಲಿ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಮೃತರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.