Publish Date: Thu, 26 Jan 2023 (15:19 IST)
Updated Date: Thu, 26 Jan 2023 (15:21 IST)
ಅರವತ್ತಕ್ಕೂ ಅಧಿಕ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನ ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಫಯಾಜ್ ಅಹ್ಮದ್ ಹಾಗೂ ಪ್ರಸಾದ್ ಬಂಧಿತ ಆರೋಪಿಗಳು.
ಬೆಂಗಳೂರಿನ ಹೆಣ್ಣೂರು, ರಾಮಮೂರ್ತಿ ನಗರದ ವಿವಿಧೆಡೆ ಮನೆಗಳ್ಳತನ, ಶಿವಮೊಗ್ಗದಲ್ಲಿ ಎಟಿಎಂ ದೋಚಲು ವಿಫಲಯತ್ನ ಮಾಡಿದ್ದ ಆರೋಪಿಗಳು ಕೋಲಾರದ ಗಲ್ ಪೇಟ್ ಠಾಣಾ ವ್ಯಾಪ್ತಿಯಲ್ಲಿ ನ್ಯಾಯಾಧೀಶರೊಬ್ಬರ ನಿವಾಸದಲ್ಲಿ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.ಕಳ್ಳತನ ಮಾಡಿದ ಬಳಿಕ ಕಾರಿನಲ್ಲಿ ಹೊರಡುತಿದ್ದ ಅರೋಪಿಗಳು ಎಲ್ಲಿಯೂ ಒಂದು ಕಡೆ ನಿಲ್ಲದೇ ಒಂದೊಂದು ಊರು ಅಲೆದಾಡಿ ಹೋದ ಊರುಗಳಲ್ಲಿ ಕದ್ದ ಚಿನ್ನವನ್ನು ಅಡವಿಟ್ಟು ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು. ಪ್ರಕರಣವೊಂದರಲ್ಲಿ ಪೀಣ್ಯ ಪೊಲೀಸರಿಂದ ಬಂಧಿತನಾಗಿದ್ದ ಫಯಾಜ್ ಅಹ್ಮದ್ ಒಂದು ವಾರದ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಸದ್ಯ ಇಬ್ಬರೂ ಅರೋಪಿಗಳನ್ನ ಬಂಧಿಸಿರುವ ಹೆಣ್ಣೂರು ಠಾಣಾ ಪೊಲೀಸರು ಬಂಧಿತರಿಂದ ಒಟ್ಟು 6 ಪ್ರಕರಣಗಳಿಗೆ ಸಂಬಂಧಿಸಿದ 695 ಗ್ರಾಂ ಚಿನ್ನಾಭರಣ, ಒಂದು ಕಾರನ್ನ ವಶಕ್ಕೆ ಪಡೆದಿದ್ದಾರೆ.
ಫುಡ್ ಡಿಲವರಿ ನೆಪದಲ್ಲಿ ಮನೆಗಳನ್ನ ಗುರುತಿಸಿಕೊಂಡು ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ನೇಪಾಳ ಮೂಲದ ಮೂವರು ಕಳ್ಳರನ್ನ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಕಡಕಾ, ಶಂಕರ್ ಥಾಪಾ, ಹಾಗೂ ಕರಣ್ ಧಮೆನಾ ಬಂಧಿತ ಆರೋಪಿಗಳು.
ಬಂಧಿತರ ಪೈಕಿ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತಿದ್ದ ಶಂಕರ್, ಕೆಲಸದ ಸಂದರ್ಭದಲ್ಲಿ ಮನೆಗಳನ್ನ ಗುರುತು ಮಾಡಿಕೊಂಡು ಉಳಿದ ಇಬ್ಬರು ಆರೋಪಿಗಳಿಗೆ ತಿಳಿಸುತ್ತಿದ್ದ. ರಾತ್ರಿ ವೇಳೆ ಕ್ಯಾಬ್ ಬುಕ್ ಮಾಡಿಕೊಂಡು ಆ ಮನೆಗಳ ಬಳಿ ಬರುತ್ತಿದ್ದ ಆರೋಪಿಗಳು ಬೀಗ ಮುರಿದು ಮನೆಯೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಕೃತ್ಯದ ಬಳಿಕ ಕದ್ದ ಮಾಲನ್ನ ನೇಪಾಳಕ್ಕೆ ರವಾನಿಸುತ್ತಿದ್ದರು.
ಅದೇ ರೀತಿ ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸಿರುವ ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿತರಿಂದ 4 ಲಕ್ಷ 20 ಸಾವಿರ ಮೌಲ್ಯದ 64 ಗ್ರಾಂ ಚಿನ್ನಭರಣ 1.5 ಕೆ.ಜಿ ಬೆಳ್ಳಿಯ ಸಾಮಾನುಗಳನ್ನ ವಶಕ್ಕೆ ಪಡೆದಿದ್ದಾರೆ.