Publish Date: Wed, 28 Jun 2023 (11:58 IST)
Updated Date: Wed, 28 Jun 2023 (11:50 IST)
ಕೋಲಾರ : ಅಂತರ್ಜಾತಿ ಪ್ರೀತಿ ವಿಚಾರದಲ್ಲಿ ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದು, ಘಟನೆಯಿಂದ ಮನನೊಂದ ಪ್ರಿಯಕರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಮತ್ತು ಪರಿಶಿಷ್ಟ ಜಾತಿ ಸಮುದಾಯದ ಗಂಗಾಧರ್ (24) ಮೃತ ದುರ್ದೈವಿಗಳಾಗಿದ್ದಾರೆ. ಇವರಿಬ್ಬರೂ ಸಹ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರವನ್ನು ಗಂಗಾಧರ್, ಕೀರ್ತಿಯ ತಂದೆ ಕೃಷ್ಣಮೂರ್ತಿಗೆ ತಿಳಿಸಿ ಮದುವೆ ಮಾಡಿಕೊಡಲು ಕೇಳಿದ್ದಾರೆ.
ಪ್ರೀತಿಗೆ ಜಾತಿಯು ಎದುರಾಗಿ ಕೀರ್ತಿಯ ಮನೆಯವರು ಮದುವೆಗೆ ಒಪ್ಪಲಿಲ್ಲ ಎನ್ನಲಾಗಿದೆ. ಕೀರ್ತಿಯ ಪೋಷಕರು ಗಂಗಾಧರ್ನನ್ನು ಮರೆತುಬಿಡು ಎಂದು ಹಲವು ಬಾರಿ ಬುದ್ದಿವಾದ ಹೇಳಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಪ್ರೇಮಿಗಳಿಬ್ಬರು ತಮ್ಮ ಪ್ರೀತಿಯನ್ನು ಮುಂದುವರೆಸಿದ್ದಾರೆ.
ಪ್ರೀತಿಯ ವಿಚಾರವಾಗಿ ಮಂಗಳವಾರ ಬೆಳಗ್ಗೆ ಕೀರ್ತಿ ಹಾಗೂ ಆಕೆಯ ತಂದೆ ಕೃಷ್ಣಮೂರ್ತಿ ನಡುವೆ ಮಾತುಕತೆ ನಡೆದಿದೆ. ಮಾತಿನ ನಡುವೆ ಕೋಪಗೊಂಡ ಕೃಷ್ಣಮೂರ್ತಿ (42) ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಗಾಢವಾಗಿ ಪ್ರೀತಿಸುತ್ತಿದ್ದ ಕೀರ್ತಿ ಸತ್ತಿರುವುದನ್ನು ನೋಡಿದ ಗಂಗಾಧರ್ ಅದೇ ಗ್ರಾಮದ ಬಳಿ ಚಲಿಸುತ್ತಿದ್ದ ಲಾಲ್ಬಾಗ್ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.