Publish Date: Mon, 26 Jun 2023 (13:10 IST)
Updated Date: Mon, 26 Jun 2023 (13:30 IST)
ಬೆಂಗಳೂರು : ಶಿವಮೊಗ್ಗದಲ್ಲಿ ನಡೆದ ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ತಡರಾತ್ರಿ ಹಿಂಸಾಚಾರ ವಿಚಾರ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ. ಶಿವಮೊಗದಲ್ಲಿ ಜಿಲ್ಲೆಯವರೇ ಗೃಹಸಚಿವರಾಗಿದ್ದರು. ಆದರೂ ಯಾಕೆ ಇದೆಲ್ಲಾ ಕಂಟ್ರೋಲ್ ಮಾಡಲಿಲ್ಲ? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ. ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತೆ ಎಂದು ಕಿಡಿ ಕಾರಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಪ್ರಮೋದ್ ಮುತಾಲಿಕ್ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡೋದಕ್ಕೆ ನಮ್ಮ ವಿರೋಧವಿದೆ. ಮತಾಂತರ ಕಾಯ್ದೆಗೆ ತಿದ್ದುಪಡಿ ತರೋದಕ್ಕೂ ನಮ್ಮ ವಿರೋಧವಿದೆ. ಸ್ವಾತಂತ್ರ್ಯ ಹೋರಾಟಗಾರರ ಪಠ್ಯವನ್ನ ಪುಸ್ತಕದಿಂದ ತೆಗೆದಿರೋದು ಸರಿಯಲ್ಲ ಎಂಬ ಅಂಶಗಳನ್ನ ಉಲ್ಲೇಖಿಸಿ ದೂರು ಸಲ್ಲಿಸಿದ್ದು, ರಾಜ್ಯಪಾಲರ ಪರವಾಗಿ ರಾಜಭವನದ ಅಧಿಕಾರಿಗಳು ಮನವಿ ಸ್ವೀಕರಿಸಿದ್ದಾರೆ.