Select Your Language

Notifications

webdunia
webdunia
webdunia
webdunia

ಶೈಕ್ಷಣಿಕ ದಾಖಲೆಗಳ ಡಿಜಿಟಲ್ ಭಂಡಾರ (ಎನ್.ಎ.ಡಿ) ನೋಂದಣಿ ಪ್ರಕ್ರಿಯೆ

ಶೈಕ್ಷಣಿಕ ದಾಖಲೆಗಳ ಡಿಜಿಟಲ್ ಭಂಡಾರ (ಎನ್.ಎ.ಡಿ) ನೋಂದಣಿ ಪ್ರಕ್ರಿಯೆ
bangalore , ಗುರುವಾರ, 30 ಸೆಪ್ಟಂಬರ್ 2021 (21:11 IST)
ಬೆಂಗಳೂರು: ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಭಂಡಾರ (ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ- ಎನ್.ಎ.ಡಿ.) ಶೈಕ್ಷಣಿಕ ಸಂಸ್ಥೆಗಳ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕ್ರಮ ವಹಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದರು. 
 
ಎನ್.ಎ.ಡಿ ಪ್ರಗತಿ ಪರಿಶೀಲನೆ ಬಗ್ಗೆ ಬುಧವಾರ ಸಭೆ ನಡೆಸಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಈ ಸಂಬಂಧ ಎಲ್ಲ ವಿಶ್ವವಿದ್ಯಾಲಯಗಳಿಗೂ ಸುತ್ತೋಲೆ ಮೂಲಕ ತಿಳಿಸುವಂತೆ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಅವರಿಗೆ ಸೂಚಿಸಿದರು. 
 
ಎನ್.ಎ.ಡಿ. ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ಎಲ್ಲಾ ವಿಶ್ವವಿದ್ಯಾಲಯಗಳೂ ಇದಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಸದ್ಯ ಕರ್ನಾಟಕದಲ್ಲಿ ಸರ್ಕಾರದ ವ್ಯಾಪ್ತಿಯಡಿಯ 18 ವಿಶ್ವವಿದ್ಯಾಲಯಗಳು, 17 ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 87 ಸಂಸ್ಥೆಗಳು ನೋಂದಣಿಗೊಂಡಿವೆ. ನೋಂದಣಿ ಸಂಖ್ಯೆಯ ದೃಷ್ಟಿಯಿಂದ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೂ ಇನ್ನೂ ನೋಂದಣಿಗೆ ಬಾಕಿ ಉಳಿದಿರುವ ಸಂಸ್ಥೆಗಳು ಸಾಕಷ್ಟಿವೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. 
 
ಎಸ್.ಎಸ್.ಎಲ್.ಸಿ. ಹಂತದಿಂದ ಹಿಡಿದು ಪಿಎಚ್.ಡಿ.ವರೆಗಿನ ಎಲ್ಲಾ ರೀತಿಯ ಶೈಕ್ಷಣಿಕ ದಾಖಲೆಗಳನ್ನು (ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ದಾಖಲೆಗಳು) ಡಿಜಿ ಲಾಕರ್ ಸ್ವರೂಪದಲ್ಲಿ ಇರಿಸುವ ವ್ಯವಸ್ಥೆ ಇದಾಗಿರುತ್ತದೆ. ವಿದ್ಯಾರ್ಥಿಗಳು ವ್ಯಾಸಂಗ ಮುಂದುವರಿಸುವ ಅಥವಾ ಉದ್ಯೋಗಕ್ಕೆ ಸೇರುವ ಸಂದರ್ಭಗಳಲ್ಲಿ ನೇರವಾಗಿ ಈ ಭಂಡಾರದಿಂದಲೇ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಲಗತ್ತಿಸಬಹುದಾಗಿರುತ್ತದೆ. ಅತ್ಯಂತ ಭದ್ರತೆಯಿಂದ ಕೂಡಿದ ವ್ಯವಸ್ಥೆ ಇದಾಗಿದ್ದು ಒಮ್ಮೆ ಅಪ್ ಲೋಡ್ ಮಾಡಲಾದ ದಾಖಲೆಗಳನ್ನು ತಿರುಚುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು. 
 
ಈಗ ಕರ್ನಾಟಕದಲ್ಲಿ 2007ನೇ ಸಾಲಿನಿಂದ ಇದುವರೆಗಿನ (2020-21) ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳನ್ನು ಅಪ್ ಲೋಡ್ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು ಮುಗಿಯುತ್ತದೆ. ಒಟ್ಟಾರೆ ಕರ್ನಾಟಕದಲ್ಲಿ ಈವರೆಗೆ 26 ಲಕ್ಷ ದಾಖಲಾತಿಗಳು ಅಪ್ ಲೋಡ್ ಆಗಿವೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. 
 
ಡಿಪ್ಲೊಮಾ, ಜಿ.ಟಿ.ಟಿ.ಸಿ, ಫಾರ್ಮಾ, ಕೌಶಲ ಸೇರಿದಂತೆ ಎಸ್ಸೆಸ್ಸೆಲ್ಸಿ ನಂತರದ ಎಲ್ಲಾ ಕೋರ್ಸ್ ಗಳಿಗೆ ಅನ್ವಯವಾಗುವ ಉಪಕ್ರಮವೂ ಇದಾಗಿದೆ. ಎಲ್ಲ ಸಂಸ್ಥೆಗಳು ಕಡ್ಡಾಯವಾಗಿ‌ ನೋಂದಣಿ ಮಾಡಿಕೊಳ್ಳಬೇಕು ಎಂದೂ ಹೇಳಿದರು. 
 
ಇ-ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಐಟಿಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಎನ್ ಎಡಿ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಉಪಸ್ಥಿತರಿದ್ದರು.
education

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ: ಇಬ್ಬರು ಪುಂಡರ ಬಂಧನ, ಘಟನೆ ಸಿಸಿಟಿವಿಯಲ್ಲಿ ಸೆರೆ