Select Your Language

Notifications

webdunia
webdunia
webdunia
webdunia

5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಸರಿಯಲ್ಲ

5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಸರಿಯಲ್ಲ
bangalore , ಗುರುವಾರ, 22 ಡಿಸೆಂಬರ್ 2022 (18:00 IST)
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ರಾಷ್ಟ್ರೀಯ ಶಿಕ್ಷಣ ನೀತಿ – ಎನ್.ಇ.ಪಿಗೆ ವಿರುದ್ಧವಾಗಿದ್ದು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಭಾರೀ ಅಸಮಾನತೆ ಸೃಷ್ಟಿಸಲಿದೆ ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರಿಕರ ಧ್ವನಿ ವೇದಿಕೆ ಕಳವಳ ವ್ಯಕ್ತಪಡಿಸಿದೆ.
 
ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿವೇಚನೆ ಇಲ್ಲದೇ ಏಕಾಏಕಿ ಕೈಗೊಂಡಿರುವ ತೀರ್ಮಾನದಿಂದ ಲಕ್ಷಾಂತರ ವಿದ್ಯಾರ್ಥಿಗಳು, ಕೋಟ್ಯಂತರ ಪಾಲಕರು, ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ. ಹೀಗಾಗಿ 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ತೀರ್ಮಾನವನ್ನು ಕೂಡಲೇ ಕೈ ಬಿಡಬೇಕು ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರಿಕರ ಧ್ವನಿ ವೇದಿಕೆ ರಾಜ್ಯಾಧ್ಯಕ್ಷ ಎಸ್. ಲಕ್ಷ್ಮಿನಾರಾಯಣ ಒತ್ತಾಯಿಸಿದ್ದಾರೆ.
 
ಪಾಲಕರು, ಪೋಷಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ಶಿಕ್ಷಣ ಸಂಸ್ಥೆ – ಸಿಬಿಎಸ್ ಇ ಪಠ್ಯ ಕ್ರಮ ಅಧ್ಯಯನ ಮಾಡುವವರಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತಿಲ್ಲ. ಸ್ಟೇಟ್ ಬೋರ್ಡ್ ಪಠ್ಯ ಕ್ರಮದಲ್ಲಿ ಓದುತ್ತಿರುವ 5 ಮತ್ತು 8 ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ಶೈಕ್ಷಣಿಕವಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ದೇಶಕ್ಕೆ ಉದಾರವಾದ ಮತ್ತು ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಆದರೆ ಶಿಕ್ಷಣ ಸಚಿವರು ಎನ್.ಇ.ಪಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡಿದ್ದಾರೆ.  ಎನ್.ಇ.ಪಿ ಒಂದೊಂದು ಶಿಕ್ಷಣ ಮಂಡಳಿಗೆ ಒಂದೊಂದು ರೀತಿಯಲ್ಲಿ ಪರೀಕ್ಷೆ ನಡೆಸುವಂತೆ ಹೇಳಿಲ್ಲ. ಇದು ವಿದ್ಯಾರ್ಥಿಗಳು ಮತ್ತು ಪಾಲಕರ ವಿರೋಧಿ ತೀರ್ಮಾನ ಎಂದು ಟೀಕಿಸಿದರು.
 
ಪಬ್ಲಿಕ್ ಪರೀಕ್ಷೆಗೆ ಡಿಸೆಂಬರ್ 12 ರಂದು ಅಧಿಸೂಚನೆ ಹೊರಡಿಸಲಾಗಿದೆ. ಉಳಿದಿರುವ ಎರಡು ತಿಂಗಳ ಅವಧಿಯಲ್ಲಿ ಪಬ್ಲಿಕ್ ಪರೀಕ್ಷೆಗೆ ಹೇಗೆ ಸಿದ್ಧವಾಗಲು ಸಾಧ್ಯ?. ಬಹುತೇಕ ಮಂದಿ ಪಾಲಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಅರಿವು ಮೂಡಿಸುವ ಪ್ರಯತ್ನವನ್ನು ಸಹ ಸರ್ಕಾರ ಕೈಗೊಂಡಿಲ್ಲ. ಸರ್ಕಾರ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ, ಮೌಲ್ಯ ಮಾಪನ ಮಾಡುತ್ತದೆ. ಹೀಗಿರುವಾಗ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಏನು?. ದುಬಾರಿ ಶುಲ್ಕ ಪಾವತಿಸಿ ಪೋಷಕರು ಮತ್ತು ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಬೇಕೆ ಎಂದು ಪ್ರಶ್ನಿಸಿದರು.
 
ಚುನಾವಣೆ ಸಂದರ್ಭದಲ್ಲಿ ಯಾವುದೋ ಹೊಸ ತೀರ್ಮಾನ ಕೈಗೊಂಡೇ ಎಂದು ಹೇಳಿಕೊಳ್ಳಲು ಸಚಿವರು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಲಗಾಮು ಹಾಕಿ ಸಚಿವರು ಚುನಾವಣೆಗೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿರುವಂತಿದೆ. ಸರ್ಕಾರ ಕಲಿಕಾ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡಬೇಕು. ಇತ್ತೀಚೆಗೆ ಕುವೆಂಪು ಸೇರಿದಂತೆ ನಾಡಿನ ಮಹನೀಯರ ಪಠ್ಯಕ್ಕೆ ಕತ್ತರಿ ಹಾಕಿ ವಿವಾದಕ್ಕೆ ಗುರಿಯಾಗಿದ್ದ ಸಚಿವರು, ಇದೀಗ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿರುವುದು ಕೂಡ ಇಂತಹದ್ದೇ ಎಡವಟ್ಟಿನ ಕೆಲಸವಾಗಿದೆ ಎಂದು ಎಸ್. ಲಕ್ಷ್ಮಿನಾರಾಯಣ ಟೀಕಿಸಿದರು.
 
ಈ ವರ್ಷ ಪಬ್ಲಿಕ್ ಪರೀಕ್ಷೆ ನಡೆಸಲು ಕೈಗೊಂಡಿರುವ ತೀರ್ಮಾನದಿಂದ ಮೊದಲು ಹಿಂದೆ ಸರಿಯಿರಿ. ಮುಂದಿನ ಚುನಾವಣೆ ಗೆದ್ದು, ನೀವು ಶಿಕ್ಷಣ ಸಚಿವರಾದ ನಂತರ ನಿಮ್ಮ ವಿವೇಚನೆಯಂತೆ ನೀವು ನಿರ್ಧಾರ ತೆಗೆದುಕೊಳ್ಳಿ. ಪಬ್ಲಿಕ್ ಪರೀಕ್ಷೆಯಂತಹ ಸಾಹಸ ಎದುರಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕವಾಗಿ ಸಿದ್ಧವಾಗಿಲ್ಲ. ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ಎಂಬ ಯಾವುದೇ ಮಾಹಿತಿಯನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿಲ್ಲ. ಸರ್ಕಾರಿ ಆದೇಶ ಹೊರಡಿಸಿದಷ್ಟು ಸುಲಭವಾಗಿ ಪಬ್ಲಿಕ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಹೇಳಿದರು.
 
ಪತ್ರಿಕಾ ಗೋಷ್ಠಿಯಲ್ಲಿ  ರಾಜ್ಯ ಕಾರ್ಯದರ್ಶಿ ಶಿವಲಿಂಗ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ,  ಕಾರ್ಯದರ್ಶಿ ರಾಜೇಶ್ವರಿ,  ಪೋಷಕರಾದ ನೇತ್ರಾ ಎಸ್. ಲಕ್ಷ್ಮೀ ನಾರಾಯಣ, ಅರ್ಚನಾ, ಸಾಧನಾ ಜೇಂದ್ರ ಅವರು ಭಾಗವಹಿಸಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿಯ ಹೊಸ ಪ್ರಯತ್ನ ಇದೀಗಾ ಕಳಪೆ ಪಟ್ಟಿಗೆ