Select Your Language

Notifications

webdunia
webdunia
webdunia
webdunia

ಕಾರು ಕದ್ದು ಚುನಾವಣೆ ಸಾಲ ತೀರಿಸಿದ ಭೂಪ

ಕಾರು ಕದ್ದು ಚುನಾವಣೆ ಸಾಲ ತೀರಿಸಿದ ಭೂಪ
ಬೆಂಗಳೂರು , ಸೋಮವಾರ, 16 ಮೇ 2022 (08:42 IST)
ಬೆಂಗಳೂರು: ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಕಾರೊಂದನ್ನು ಟೆಸ್ಟ್‌ ಡ್ರೈವ್‌ ನೆಪದಲ್ಲಿ ಮಾಲಿಕನಿಂದ ಪಡೆದು ಪರಾರಿಯಾಗಿದ್ದ ಖತರ್ನಾಕ್‌ ಕಳ್ಳ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
 
ಅಮೃತ ನಗರದ ನಿವಾಸಿ ಎಂ.ಜಿ.ವೆಂಕಟೇಶ್‌ ನಾಯ್ಕ (36) ಬಂಧಿತ. ಈತನಿಂದ ಕಾರು ಹಾಗೂ ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಕಳೆದ ಜ.30ರಂದು ಹೆಬ್ಬಾಳ ಕಾಫಿಬೋರ್ಡ್‌ ಲೇಔಟ್‌ ನಿವಾಸಿ ಎಂಜಿನಿಯರ್‌ ರವೀಂದ್ರ ಇಲೂರಿ ಅವರ ಬ್ರೀಜಾ ಕಾರನ್ನು ಖರೀದಿಸುವ ನೆಪದಲ್ಲಿ ಟೆಸ್ಟ್‌ ಡ್ರೈವ್‌ ಮಾಡುವುದಾಗಿ ಕಾರು ಪಡೆದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಬಾಗೇಪಲ್ಲಿ ಮೂಲದ ಆರೋಪಿ ವೆಂಕಟೇಶ್‌ ನಾಯ್ಕ ಊರಿನಲ್ಲಿ ಪತ್ನಿಯನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದ. ಸಾಲ ಮಾಡಿ ಚುನಾವಣೆಗೆ ಹಣ ಖರ್ಚು ಮಾಡಿದ್ದ. ಬಳಿಕ ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಬ್ರೀಜಾ ಕಾರನ್ನೇ ಮಾರಾಟ ಮಾಡಿ ಸಾಲ ತೀರಿಸಿದ್ದ. ಇನ್ನು ಕಾರು ಮಾರಾಟ ಮಾಡಿರುವ ಸುದ್ದಿ ಊರಿನವರಿಗೆ ತಿಳಿದರೆ ಅವಮಾನವಾಗಲಿದೆ ಎಂದು ಭಾವಿಸಿ, ಬೇರೊಂದು ಬ್ರೀಜಾ ಕಾರನ್ನೇ ಕದಿಯಲು ಸಂಚು ರೂಪಿಸಿದ್ದ. ಅದಕ್ಕಾಗಿ ಓಎಲ್‌ಎಕ್ಸ್‌ ಆ್ಯಪ್‌ನಲ್ಲಿ ಹುಡುಕಾಟ ನಡೆಸುತ್ತಿದ್ದ.
 
ಈ ವೇಳೆ ಎಂಜಿನಿಯರ್‌ ರವೀಂದ್ರ ಅವರು ತಮ್ಮ ಬ್ರೀಜಾ ಕಾರನ್ನು ಮಾರಾಟ ಮಾಡಲು ಓಎಲ್‌ಎಕ್ಸ್‌ನಲ್ಲಿ ಕಾರಿನ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ್ದ ಆರೋಪಿಯು  ರವೀಂದ್ರ ಅವರನ್ನು ಸಂಪರ್ಕಿಸಿ ಕಾರು ಖರೀದಿಸುವುದಾಗಿ ಹೇಳಿದ್ದ. ಬಳಿಕ ವಿಳಾಸ ಪಡೆದು ಅಂದು ರಾತ್ರಿ 7.30ಕ್ಕೆ ರವೀಂದ್ರ ಅವರ ಮನೆ ಬಳಿ ತೆರಳಿದ್ದ. ಈ ವೇಳೆ ಟೆಸ್ಟ್‌ ಡ್ರೈವ್‌ ಮಾಡುವುದಾಗಿ ರವೀಂದ್ರ ಅವರಿಂದ ಕಾರು ಪಡೆದು ಪರಾರಿಯಾಗಿದ್ದ. ಈ ಸಂಬಂಧ ರವೀಂದ್ರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 
ಆರೋಪಿ ವೆಂಕಟೇಶ್‌, ಓಎಲ್‌ಎಕ್ಸ್‌ನಲ್ಲಿ ಬ್ರೀಜಾ ಕಾರು ನೋಡಿದ ಬಳಿಕ ಮಾಲಿಕನನ್ನು ಸಂಪರ್ಕಿಸಲು ತನ್ನ ಮೊಬೈಲ್‌ ಬಳಸಿರಲಿಲ್ಲ. ಏಕೆಂದರೆ, ಕಳವು ಬಳಿಕ ಮೊಬೈಲ್‌ ನಂಬರ್‌ ಮೂಲಕ ಪೊಲೀಸರಿಗೆ ಸಿಕ್ಕಿ ಬೀಳಬಹುದು ಎಂದು ಭಾವಿಸಿದ್ದ. ಹೀಗಾಗಿ ಬಾಗಲೂರಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್‌ ಕದ್ದಿದ್ದ ಆರೋಪಿ ಆ ನಂಬರ್‌ನಿಂದ ಕಾರು ಮಾಲಿಕ ರವೀಂದ್ರ ಅವರನ್ನು ಸಂಪರ್ಕಿಸಿ ಕಾರು ಪಡೆದು ಪರಾರಿಯಾಗಿದ್ದ. ದೂರಿನ ಮೇರೆಗೆ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ತನಿಖೆಗೆ ಇಳಿದ ಪೊಲೀಸರಿಗೆ ಈ ನಂಬರ್‌ ಇರುವ ಮೊಬೈಲ್‌ ಕಳುವಾಗಿರುವುದು ಗೊತ್ತಾಗಿದೆ.
 
ಓಎಲ್‌ಎಕ್ಸ್‌ ಕಂಪನಿ ಸಂಪರ್ಕಿಸಿ ಸುಮಾರು ಎರಡೂವರೆ ಸಾವಿರ ಓಎಲ್‌ಎಕ್ಸ್‌ ಐಪಿ ಅಡ್ರೆಸ್‌ ಜಾಲಾಡಿದ್ದರು. ಈ ಪೈಕಿ ಎರಡು ಐಪಿ ಅಡ್ರೆಸ್‌ಗಳ ಬಗ್ಗೆ ಅನುಮಾನ ಬಂದು ತಾಂತ್ರಿಕ ತನಿಖೆ ಮಾಡಿದಾಗ ಆರೋಪಿಯ ಜಾಡು ಸಿಕ್ಕಿತು. ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಆರೋಪಿಯು ಓಡಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಲಾಯರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅರೆಸ್ಟ್