Select Your Language

Notifications

webdunia
webdunia
webdunia
webdunia

ಎಣ್ಣೆ ಪ್ರಿಯರಿಗೆ ಶೀಘ್ರವೇ ಗುಡ್ ನ್ಯೂಸ್ !

ಎಣ್ಣೆ ಪ್ರಿಯರಿಗೆ ಶೀಘ್ರವೇ ಗುಡ್ ನ್ಯೂಸ್ !
ಬೆಂಗಳೂರು , ಭಾನುವಾರ, 15 ಮೇ 2022 (11:45 IST)
ಬೆಂಗಳೂರು: ತಾತ್ಕಾಲಿಕ ಅಥವಾ ಸಾಂದರ್ಭಿಕ ಸನ್ನದು (ಸಿಎಲ್‌-5) ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಶೀಘ್ರದಲ್ಲಿ ಆದೇಶ ಪ್ರಕಟಿಸಲಿದೆ.
ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದು ಕೆಎಸ್‌ಬಿಸಿಎಲ್‌ ಡಿಪೋಗಳಲ್ಲಿ ಮಾತ್ರವಲ್ಲದೆ ಇತರೆ ಮದ್ಯ ಮಳಿಗೆಗಳಲ್ಲೂ ಮದ್ಯ ಖರೀದಿಗೆ ಅವಕಾಶ ನೀಡಲು ಏಪ್ರಿಲ್‌ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು.
 
ಮದ್ಯ ಮಾರಾಟಗಾರರ ಒಕ್ಕೂಟ ಸೇರಿದಂತೆ ಯಾರೂ ಸಹ ಕರಡು ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಸದ್ಯದಲ್ಲೇ ಅಂತಿಮ ಆದೇಶ ಪ್ರಕಟಿಸಲಾಗುವುದು ಎಂದು ಅಬಕಾರಿ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
 
ಸಿಎಲ್‌-5 ಸನ್ನದುದಾರರು ಈವರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಡಿಪೋಗಳಿಂದ ಮಾತ್ರ ಮದ್ಯ ಖರೀದಿ ಮಾಡಲು ಅನುಮತಿ ಇತ್ತು. ನಿಗದಿತ ದಿನಾಂಕದಂದು ಸನ್ನದು ಜತೆಗೆ ಡಿಪೋಗೆ ತೆರಳಿ ಆಗ ಲಭ್ಯವಿರುವ ಮದ್ಯಗಳಿಗೆ ಇಂಡೆಂಟ್‌ ಸಲ್ಲಿಸಬೇಕಿತ್ತು. ಇಂಡೆಂಟ್‌ ಸಲ್ಲಿಸಿರುವ ಮದ್ಯ ಲಭ್ಯತೆ ಆಧಾರದ ಮೇಲೆ ನಿಗಮದ ಬ್ಯಾಂಕ್‌ ಖಾತೆಗೆ ಹಣ ಪಾವತಿಸಬೇಕಿತ್ತು. ಬಳಿಕವಷ್ಟೇ ಮದ್ಯವನ್ನು ನೀಡಲಾಗುತ್ತಿತ್ತು. ಈ ವೇಳೆ ಅಗತ್ಯವಿರುವ ಬ್ರ್ಯಾಂಡ್‌ನ ಬಿಯರ್‌ ಅಥವಾ ಮದ್ಯ ಲಭ್ಯವಾಗುತ್ತಿರಲಿಲ್ಲ ಎಂಬ ದೂರುಗಳು ಇದ್ದವು.
 
ಇದೀಗ ಅಬಕಾರಿ ಇಲಾಖೆ ನಿಯಮಗಳಿಗೆ ತಿದ್ದುಪಡಿ ತಂದು ಡಿಪೋಗಳಲ್ಲಿ ಮಾತ್ರವಲ್ಲದೆ ಸಿಎಲ್‌-11 , ಸಿಎಲ್‌-2 ಚಿಲ್ಲರೆ ಮದ್ಯ ಮಾರಾಟ ಮಳಿಗೆ, ಸಿಎಲ್‌-11ಸಿ ಎಂಎಸ್‌ಐಎಲ್‌ ಮಳಿಗೆಗಳಲ್ಲೂ ಸಿಎಲ್‌-5 ಸನ್ನದು ತೋರಿಸಿ ಮದ್ಯ ಖರೀದಿ ಮಾಡಬಹುದು. ಸಿಎಲ್‌-5 ಸನ್ನದುದಾರರಿಗೆ ಅಗತ್ಯವಿರುವ ಯಾವುದೇ ರೀತಿಯ ಮದ್ಯವನ್ನು ಸೂಕ್ತ ಬಿಲ್ಲುಗಳ ನಿರ್ವಹಣೆಯೊಂದಿಗೆ ನೀಡಲು ಅವಕಾಶ ನೀಡಲಾಗಿದೆ.
 
ಮದುವೆ, ಹುಟ್ಟುಹಬ್ಬ ಆಚರಣೆ, ಬೀಗರೂಟ ಮತ್ತಿತರ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಮದ್ಯ ಬಳಕೆಗೆ ತಾತ್ಕಾಲಿಕ ಸನ್ನದು (ಸಿಎಲ್‌-5) ಪಡೆಯುವುದು ಕಡ್ಡಾಯ. ಸನ್ನದು ಅಥವಾ ಪರವಾನಗಿ ಪಡೆಯದೆ ಮದ್ಯ ಬಳಕೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ.
 
ಹೀಗಾಗಿ ಸ್ಥಳೀಯ ಪೊಲೀಸ್‌ ಠಾಣೆಯಿಂದ ಎನ್‌ಒಸಿ ಪಡೆದು ಜಿಲ್ಲಾ ಅಬಕಾರಿ ಆಯುಕ್ತರ ಬಳಿ 10 ಸಾವಿರ ರು. ಶುಲ್ಕ ಪಾವತಿಸಿದರೆ ಒಂದು ದಿನದ ಮಟ್ಟಿಗೆ ಸಿಎಲ್‌-5 ಸನ್ನದು ದೊರೆಯಲಿದೆ. ಅಲ್ಲದೆ ಅಬಕಾರಿ ಆಯುಕ್ತರು ಸ್ಥಳೀಯ ಪೊಲೀಸ್‌ ಠಾಣೆಗೂ ಸನ್ನದು ಪತ್ರವನ್ನು ಕಳುಹಿಸಲಿದ್ದು, ಮಿಲಿಟರಿ ಮದ್ಯ, ಡ್ಯೂಟಿ ಫ್ರೀ ಮದ್ಯ ಹೊರತುಪಡಿಸಿ ಸ್ವದೇಶಿ ಹಾಗೂ ವಿದೇಶಿ ಮದ್ಯ ಬಳಕೆಗೆ ಅವಕಾಶ ನೀಡಲಾಗುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಲೆ ಮಹದೇಶ್ವರ ದೇವಾಲಯ 2.57 ಕೋಟಿ ರೂ ಹುಂಡಿ ಸಂಗ್ರಹ