Select Your Language

Notifications

webdunia
webdunia
webdunia
webdunia

ಲಾಡ್ಜ್‌ನಲ್ಲಿ ತೃತೀಯ ಲಿಂಗಿಗಳು, ಯುವಕನ ಮಧ್ಯೆ ಗಲಾಟೆ, ಆಸ್ಪತ್ರೆಗೆ ದಾಖಲು

ಲಾಡ್ಜ್‌ನಲ್ಲಿ ತೃತೀಯ ಲಿಂಗಿಗಳು, ಯುವಕನ ಮಧ್ಯೆ ಗಲಾಟೆ, ಆಸ್ಪತ್ರೆಗೆ ದಾಖಲು
ಬೆಂಗಳೂರು , ಭಾನುವಾರ, 15 ಮೇ 2022 (09:45 IST)
ಬೆಂಗಳೂರು:  ಹಣದ ವಿಚಾರಕ್ಕೆ ಲಾಡ್ಜ್‌ನಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು ಹಾಗೂ ಯುವಕ ಪರಸ್ಪರ ಹೊಡೆದಾಡಿಕೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಟನ್‌ ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 
ಮೂಡಲಪಾಳ್ಯ ನಿವಾಸಿಗಳಾದ ಸಂಜನಾ(28) ಮತ್ತು ಅರ್ಚನಾ(30) ಗಾಯಗೊಂಡ ತೃತೀಯ ಲಿಂಗಿಗಳು. ಕೋಲ್ಕತ್ತಾ ಮೂಲದ ಅಂಕಿತ್‌ ಕುಮಾರ್‌(28) ಗಾಯಗೊಂಡವ. ಮೂವರು ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ತೃತೀಯ ಲಿಂಗಿಗಳಾದ ಸಂಜನಾ ಹಾಗೂ ಅರ್ಚನಾ ಮೆಜೆಸ್ಟಿಕ್‌ ಪ್ರದೇಶದಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಅಂಕಿತ್‌ ಕುಮಾರ್‌ ಖಾಸಗಿ ಆಸ್ಪತ್ರೆಯ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಾನೆ.  ಮೆಜೆಸ್ಟಿಕ್‌ ಬಂದಿರುವ ಅಂಕಿತ್‌ ಕುಮಾರ್‌ಗೆ ಅಲ್ಲೇ ಇದ್ದ ಸಂಜನಾ ಹಾಗೂ ಅರ್ಚನಾ ಪರಿಚಯವಾಗಿದೆ. ಈ ವೇಳೆ ಏಕಾಂತದಲ್ಲಿ ಸಮಯ ಕಳೆಯಲು ಮೂವರು ಕಾಟನ್‌ ಪೇಟೆಯ ಲಾಡ್ಜ್‌ವೊಂದಕ್ಕೆ ತೆರಳಿದ್ದರು. 
 
ಈ ವೇಳೆ ಹಣಕಾಸಿನ ವಿಚಾರವಾಗಿ ಮೂವರ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಅಂಕಿತ್‌ ಕುಮಾರ್‌ ಚಾಕುವಿನಿಂದ ಸಂಜನಾ ಮತ್ತು ಅರ್ಚನಾ ಕತ್ತು, ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಈ ಗಲಾಟೆ ವೇಳೆ ಸಂಜನಾ ಮತ್ತು ಅರ್ಚನಾ ಸಹ ಯಾವುದೋ ವಸ್ತುವಿನಿಂದ ಅಂಕಿತ್‌ ಕುಮಾರ್‌ ತಲೆಗೆ ಬಲವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
 
ಈ ವೇಳೆ ಲಾಡ್ಜ್‌ನ ಕೋಣೆಯಲ್ಲಿ ಚೀರಾಟದ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ರೂಮ್‌ ಬಾಯ್‌ ಓಡಿ ಹೋಗಿ ನೋಡಿದಾಗ ಮೂವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬಳಿಕ ಲಾಡ್ಜ್‌ ಸಿಬ್ಬಂದಿ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ತೃತೀಯ ಲಿಂಗಿಗಳ ಸ್ನೇಹಿತೆ ಕಸ್ತೂರಿ ನೀಡಿದ ದೂರಿನ ಮೇರೆಗೆ ಕಾಟನ್‌ ಪೇಟೆ ಠಾಣೆ ಪೊಲೀಸರು, ಅಂಕಿತ್‌ ಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಮೂವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗಲಾಟೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದಿರುವುದು ಕಂಡು ಬಂದಿದೆ. ಮೂವರು ಚೇತರಿಸಿಕೊಂಡ ಬಳಿಕ ವಿಚಾರಣೆಗೆ ಒಳಪಡಿಸಿದಾಗ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಕೊಟ್ಟು ಸಚಿವರಾಗುವ ಸ್ಥಿತಿ ನಮ್ಮಲ್ಲಿಲ್ಲ: ಸಚಿವ ಸುನೀಲ್‌