ಮಧ್ಯಪ್ರದೇಶದ ಇಂದೋರ್ ದೇವಾಲಯದ ಮೆಟ್ಟಿಲು ಬಾವಿ ಕುಸಿದ ಘಟನೆಯಲ್ಲಿ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ.ಇಳಯರಾಜ ಟಿ. ತಿಳಿಸಿದ್ದಾರೆ. ಒಟ್ಟು 35 ಮಂದಿ ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. 14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. 18 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯು ಗುರುವಾರ ಸುಮಾರು 12:30ಕ್ಕೆ ಪ್ರಾರಂಭವಾಗಿದ್ದು, ಇನ್ನೂ ಮುಂದುವರೆದಿದೆ. ಮಧ್ಯಪ್ರದೇಶ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ತುರ್ತು ಮತ್ತು ಪ್ರತಿಕ್ರಿಯೆ ಪಡೆ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.