Select Your Language

Notifications

webdunia
webdunia
webdunia
webdunia

ಚಳಿಗಾಳಿಗೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ತಾಪಮಾನ

ಚಳಿಗಾಳಿಗೆ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ತಾಪಮಾನ
bangalore , ಭಾನುವಾರ, 19 ಡಿಸೆಂಬರ್ 2021 (20:52 IST)
ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶನಿವಾರ ಶೀತಗಾಳಿ ತೀವ್ರವಾಗಿದ್ದು, ರಾಜಸ್ಥಾನದ ಫತೇಪುರ (ಸಿಕರ್) ಮತ್ತು ಚುರು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ.
ಸಿಕರ್ ಜಿಲ್ಲೆಯ ಫತೇಪುರದಲ್ಲಿ ಮೈನಸ್ 3.3 ಡಿಗ್ರಿ ಸೆಲ್ಷಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಪಕ್ಕದ ಚುರು ಎಂಬಲ್ಲಿ ಮೈನಸ್ 1.1 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಜೈಪುರದ ಜನತೆಗೆ ಪ್ರಸಕ್ತ ಋತುವಿನಲ್ಲೇ ಅತ್ಯಂತ ಚಳಿ ಮುಂಜಾನೆ ಅನುಭವಕ್ಕೆ ಬಂತು. ಮುಂಜಾನೆ ಉಷ್ಣಾಂಶ 4.9 ಡಿಗ್ರಿ ಸೆಲ್ಷಿಯಸ್ ವರದಿಯಾಗಿದ್ದು, ಇದು ವಾಡಿಕೆಯ ತಾಪಮಾನಕ್ಕಿಂತ 4 ಡಿಗ್ರಿಯಷ್ಟು ಕಡಿಮೆ.
ಉತ್ತರ ಭಾಗದಿಂದ ಮೈಕೊರೆಯುವ ಚಳಿಗಾಳಿ ಬೀಸುತ್ತಿರುವುದರಿಂದ ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ವಿವಿಧೆಡೆಗಳಲ್ಲಿ ವ್ಯಾಪಕ ಚಳಿ ವರದಿಯಾಗಿದೆ. ಗ್ವಾಲಿಯರ್, ದಾಟಿಯಾ ಮತ್ತು ಛಾತ್‌ಪುರ ಜಿಲ್ಲೆಯ ನವಗಾಂವ್‌ನಲ್ಲಿ 4 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಮುನ್ಸೂಚನಾ ಇಲಾಖೆಯ ಭೋಪಾಲ್ ಕಚೇರಿಯ ತಜ್ಞ ಪಿ.ಕೆ.ಶಾ ಹೇಳಿದ್ದಾರೆ.
ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವ್ಯಾಪಕ ಹಿಮಪಾತವಾಗುತ್ತಿದ್ದು, ಅಲ್ಲಿಂದ ಬೀಸುವ ಗಾಳಿ ವ್ಯಾಪಕ ಚಳಿಗೆ ಕಾರಣವಾಗಿದೆ. ಶ್ರೀನಗರ ಹಾಗೂ ಜಮ್ಮುವಿನಲ್ಲಿ ತಾಪಮಾನ ಕ್ರಮವಾಗಿ ಮೈನಸ್ 6 ಡಿಗ್ರಿ ಹಾಗೂ 2.3 ಡಿಗ್ರಿ ಇದ್ದು, ಇದು ಪ್ರಸಕ್ತ ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿದೆ. ಪೆಹಲ್‌ ಗಾಂವ್‌ನಲ್ಲಿ ಮೈನಸ್ 8.3 ಡಿಗ್ರಿ ಮತ್ತು ಗುಲ್ಮಾರ್ಗ್‌ನಲ್ಲಿ ಮೈನಸ್ 8.5 ಡಿಗ್ರಿ ಸೆಲ್ಷಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಲಡಾಖ್‌ನ ದ್ರಾಸ್ ಪಟ್ಟಣದಲ್ಲಿ ಮೈನಸ್ 20.3 ಡಿಗ್ರಿ ಹಾಗೂ ಲೆಹ್‌ ನಲ್ಲಿ ಮೈನಸ್ 15.3 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಇದುವರೆಗಿನ ಕನಿಷ್ಠ ರಾತ್ರಿ ತಾಪಮಾನ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಂಕ್ರಾಮಿಕ ರೋಗಗಳನ್ನು ಎದುರಿಸುತ್ತಿರುವ ಪ್ರಾಣಿಗಳು, ಲಸಿಕೆಯಿಂದ ವಂಚಿತ