ಕಳೆದ ಎರಡು ವಾರದಿಂದ ವಿರಾಮ ನೀಡಿದ್ದ ಮಳೆರಾಯ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾನೆ. ಡಿಸೆಂಬರ್ 17ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ.
ಸಾಧಾರಣ ಮಳೆಯಾದ್ರೂ ರೈತ ವರ್ಗಕ್ಕೆ ಹೊಡೆತ ನೀಡಲಿದೆ. ಚಳಿಗಾಲದಲ್ಲಿಯ ಆಕಾಲಿಕ ಮಳೆ ಬೆಳೆಯನ್ನು ಹಾಳು ಮಾಡುವ ಮೂಲಕ ಇಳುವರಿಯನ್ನು ಕುಂಠಿತಗೊಳಿಸುತ್ತದೆ.
ಮುಂದಿನ 5 ದಿನಗಳಲ್ಲಿ ತಮಿಳುನಾಡು-ಪುದುಚೇರಿ-ಕಾರೈಕಲ್, ಕೇರಳ- ಮಾಹೆ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತು ಮುಂದಿನ 2 ದಿನಗಳಲ್ಲಿ ದಕ್ಷಿಣ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ/ಚದುರಿದ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಂತೂ ಮಳೆ ಸಂಪೂರ್ಣ ಪೂರ್ಣ ವಿರಾಮವನನ್ನೇ ನೀಡಿಲ್ಲ. ಆಗಾಗ ಮಳೆಯ ಸಿಂಚನ ನಗರದಲ್ಲಿ ಆಗುತ್ತಿದ್ದು, ಚುಮು ಚುಮು ಚಳಿಯಲ್ಲಿ ತಂಪಾದ ಹಿತವನ್ನು ನೀಡುತ್ತಿದೆ. ಬೆಳಗಿನ ಜಾವ ಮತ್ತು ಸಂಜೆಯಾಗುತ್ತಿದ್ದಂತೆ ಬೀಸುವ ಸುಳಿಗಾಳಿಗೆ ಜನರು ಮನೆಯಿಂದ ಹೊರ ಬರದಂತೆ ತಡೆಯುತ್ತಿದೆ, ಇಂದು ಬೆಂಗಳೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.