Publish Date: Tue, 23 Jun 2026 (16:38 IST)
Updated Date: Tue, 23 Jun 2026 (16:44 IST)
ಬೆಂಗಳೂರು: ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಜಾರಿ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿ ನಗರದ ಅಭಿವೃದ್ಧಿ ಮತ್ತು ನಾಗರಿಕರಿಗೆ ಅನುಕೂಲವಾಗುವ 15 ಅಂಶಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ನಗರದ ಜನರ ಜೀವನ ಮಟ್ಟ ಸುಧಾರಿಸುವ ಕ್ರಮಗಳಿಗೆ ಶೇ ನೂರರಷ್ಟು ಬೆಂಬಲವನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ನೀಡಲಾಗುವುದು. ಸಚಿವರಿಗೆ ಅಭಿವೃದ್ಧಿ ಸಂಬಂಧ ವಿವರವನ್ನು ಅಂಕಿ ಅಂಶಗಳ ಸಮೇತ ನೀಡಿದ್ದೇನೆ. ರಾಜ್ಯ ಸರ್ಕಾರದ ಮೂವತ್ತಕ್ಕೂ ಹೆಚ್ಚು ಯೋಜನೆಗಳು ಬಾಕಿ ಇವೆ. ಹೊಸ ಯೋಜನೆ ಜಾರಿ ಮಾಡುವ ಮೊದಲು ಹಳೆಯ ಯೋಜನೆಗಳನ್ನು ಶೀಘ್ರ ಮುಗಿಸಬೇಕು ಎಂದು ತಿಳಿಸಿರುವುದಾಗಿ ಹೇಳಿದರು.
ಬಿಎಂಆರ್‍ಸಿಲ್, ಬಿಡಿಎ, ಬಿಎಂಎಲ್‍ಟಿಎ. ಕೆಆರ್‍ಐಡಿಎಲ್ ಸೇರಿ 12 ಕ್ಕೂ ಹೆಚ್ಚು ಮೂಲಸೌಕರ್ಯ ಏಜೆನ್ಸಿಗಳು ಬೆಂಗಳೂರಿನಲ್ಲಿವೆ. ಇವುಗಳ ನಡುವೆ ಅಂತರ ಸಮನ್ವಯ ಏಜೆನ್ಸಿ ಇಲ್ಲ. ಆದ್ದರಿಂದ ಬಿಎಂಎಲ್‍ಟಿಎಗೆ ಅಧ್ಯಕ್ಷರ ನೇಮಕ ಮಾಡಿ ನೋಡಲ್ ಏಜೆನ್ಸಿ ಮಾಡಬೇಕು ಎಂದರು. ಮೆಟ್ರೊ ವಿಸ್ತರಣೆ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗದ ಬಗ್ಗೆ ಚರ್ಚಿಸಿರುವುದಾಗಿ ಹೇಳಿದರು.
ನಾಲ್ಕೂವರೆ ವರ್ಷಗಳಿಂದ ಹೊಸ ಮೆಟ್ರೊ ಕಾಮಗಾರಿ ಆರಂಭವಾಗಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೊ ಮೂರನೇ ಹಂತದ ಆರೆಂಜ್ ಮಾರ್ಗಕ್ಕೆ ಎರಡು ವರ್ಷ ಆದರೂ ಟೆಂಡರ್ ಆಗಿಲ್ಲ. ಇದರ ವೆಚ್ಚ ಹೆಚ್ಚಳವಾಗುತ್ತಿದೆ. ಮೆಟ್ರೊ ಯೋಜನೆಯಲ್ಲಿ ವೆಚ್ಚ ಕಡಿಮೆ ಮಾಡಲು ಭೂಗತ ಮೆಟ್ರೊ ನಿಲ್ದಾಣಗಳ ಉದ್ದ ಕಡಿಮೆ ಮಾಡಿದ್ದಾರೆ. ಇದರಿಂದ ಎಂಟು ಬೋಗಿ ಬದಲು ಆರು ಬೋಗಿಯ ಮೆಟ್ರೊ ಮಾತ್ರ ನಿಲುಗಡೆ ಮಾಡಬಹುದು. ವೆಚ್ಚ ಕಡಿಮೆ ಮಾಡಲು ನಿಲ್ದಾಣದ ಪ್ಲಾಟ್‍ಫಾರಂ ಉದ್ದ ಕಡಿಮೆ ಮಾಡಿದರೆ ಉಪಯೋಗ ಆಗದು ಎಂದರು.
ಮೆಟ್ರೊ ಬೇಗ ಆರಂಭವಾಗಲಿ
ಬೆಂಗಳೂರಿನಲ್ಲಿ ಬೇರೆ ಬೇರೆ ಕಡೆಗಳಿಂದ ಬಂದು ಕೆಲಸ ಮಾಡುವವರು ಮುಂಜಾನೆ ಮೆಟ್ರೊಗೆ ಕಾಯಬೇಕಾಗಿದೆ. ಆದ್ದರಿಂದ ಪ್ರತಿ ದಿನ ಮೆಟ್ರೊವನ್ನು ಬೆಳಗ್ಗೆ ಐದು ಗಂಟೆಗೆ ಆರಂಭ ಮಾಡಬೇಕು. ಬೇರೆ ಮಹಾನಗರದಲ್ಲಿ ಮೆಟ್ರೊ ಮುಂಜಾನೆ ಬೇಗ ಆರಂಭವಾಗುತ್ತದೆ. ಅದೇ ರೀತಿ ಬೆಂಗಳೂರಿನಲ್ಲೂ ಆರಂಭ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ವಿವರಿಸಿದರು.
ಕೇಂದ್ರಕ್ಕೆ ಪ್ರಸ್ತಾವನೆ ಬಂದಿಲ್ಲ
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಅರ್ಬನ್ ಚಾಲೆಂಜ್ ಫಂಡ್ (ಯುಸಿಎಫ್) ಅಡಿ ₹1 ಲಕ್ಷ ಕೋಟಿ ಇಡಲಾಗಿದೆ. ರಾಜ್ಯ ಸರ್ಕಾರದಿಂದ ಈ ಯೋಜನೆಯಡಿ ಅನುದಾನಕ್ಕಾಗಿ ಪ್ರಸ್ತಾವನೆ ಬಂದಿಲ್ಲ. ಸರಿಯಾದ ಡಿಪಿಆರ್ ಕೊಟ್ಟರೆ ಕೇಂದ್ರ ಹಣ ನೀಡುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎರಡು ವರ್ಷದ ಹಿಂದೆ ಮಹಾನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವವರಿಗೆ ಸಹಾಯವಾಗಲು ಯೋಜನೆ ರೂಪಿಸಲಾಗಿದೆ. ಈ ಸರ್ಕಾರ ಬಂದ ಮೇಲೆ ಈ ಯೋಜನೆಯಡಿ ಒಂದೇ ಒಂದು ಬಾಡಿಗೆ ಮನೆ ಕಟ್ಟಿಲ್ಲ. ಅರ್ಜಿ ಸಹ ಬಂದಿಲ್ಲ. ಈ ಬಗ್ಗೆ ಗಮನ ಹರಿಸಲು ಸಚಿವರನ್ನು ಕೋರಿರುವುದಾಗಿ ಹೇಳಿದರು. ಇದಲ್ಲದೇ ಕುಡಿಯುವ ನೀರಿನ ಸಮಸ್ಯೆ, ಕೆರೆ ಉಳಿಸುವುದು, ಅಂತರ್ಜಲ ಕಾಪಾಡುವ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಜಿಬಿಎಯ ಐದು ಪಾಲಿಕೆಗಳಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ, ಎಂಜಿನಿಯರ್‍ಗಳು ಇಲ್ಲ. ಯೋಜನೆ ಘೋಷಣೆ ಮಾಡುವ ಮೊದಲು ಸಿಬ್ಬಂದಿ ನೇಮಕ ಮಾಡಬೇಕು ಎಂದರು.
ಗುಂಡಿಗೆ ಹಾಕಿದ ಹಣ ಎಲ್ಲಿ ಹೋಯಿತು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಕೋಟಿಯನ್ನು ಗುಂಡಿ ಮುಚ್ಚಲು ವ್ಯಯಿಸಿರುವುದಾಗಿ ಹೇಳಿದೆ. ಆದರೂ ಗುಂಡಿಗಳು ಮಾತ್ರ ಹಾಗೇ ಇವೆ. ಎನ್‍ಸಿಆರ್‍ಬಿ ಮಾಹಿತಿ ಪ್ರಕಾರ ಗುಂಡಿಗೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾದರೆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಸದ್ಯ ಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿದ್ದರು. ಆಗ ಅವರು ಬೇರೆ ಬೇರೆ ಅವಧಿಯಲ್ಲಿ ನೀಡಿದ ಹೇಳಿಕೆಗಳು ಇವೆ. 2023 ರ ಡಿಸೆಂಬರ್‍ನಲ್ಲಿ ರೂ. 7 ಕೋಟಿ ಬಿಬಿಎಂಪಿಯಲ್ಲಿ ಗುಂಡಿ ಮುಚ್ಚಲು ವ್ಯಯಿಸಿದ್ದೇವೆ ಎಂದು ಹೇಳಿದ್ದರು. ಆದರೆ ಡಿಸೆಂಬರ್ 2024 ರಲ್ಲಿ ಶೇ 63 ರಷ್ಟು ಗುಂಡಿ ಜಾಸ್ತಿ ಆಗಿದೆ ಎಂದು ವಿಧಾನ ಪರಿಷತ್‍ನಲ್ಲಿ ಹೇಳಿದರು. ಆಗಸ್ಟ್ 2025 ರಲ್ಲಿ ಬಿಬಿಎಂಪಿ 12 ಕೋಟಿಯನ್ನು ರಸ್ತೆ ಗುಂಡಿ ಮುಚ್ಚಲು ವೆಚ್ಚ ಮಾಡಿದೆ. ಆದರೆ ಶೇ 63 ರಷ್ಟು ಗುಂಡಿ ಜಾಸ್ತಿ ಆಗಿದೆ ಎಂದು ಹೇಳಿದ್ದಾರೆ. 2025 ರ ಸೆಪ್ಟೆಂಬರ್‍ನಲ್ಲಿ 750 ಕೋಟಿಯನ್ನು ರಸ್ತೆ ಗುಂಡಿ ಮುಚ್ಚಲು ಘೋಷಣೆ ಮಾಡಿದರು. ಮತ್ತೆ 1100 ಕೋಟಿ ಅನುದಾನ ಗುಂಡಿ ಮುಚ್ಚಲು ಘೋಷಣೆ ಮಾಡಿದರು. ಹಾಗಾದರೆ ಯಾವ ಹಣ? ಎಲ್ಲಿ ಹೋಗುತ್ತಿದೆ? ಎಂದು ಪ್ರಶ್ನಿಸಿದರು.
ಜಿಬಿಎ ರಚನೆ ಆದ ಮೇಲೂ 2200 ಕೋಟಿ ಹಣ ನೀಡಿದ್ದೇವೆ ಎಂದು ಹೇಳಿದರು. ಮತ್ತೆ ವೈಟ್ ಟಾಪಿಂಗ್‍ಗೆ ಹಣ ನೀಡಿದ್ದೇವೆ ಎಂದರು. ಐದೂವರೆ ಸಾವಿರ ಕೋಟಿ ವ್ಯಯಿಸಿ ರಸ್ತೆ ಮಾಡಿದ ಮೇಲೆ ಡಿಸಿಎಂ, ಸಿಎಂ ಆದರು. ಅವರ ಸಂಪುಟದಲ್ಲಿ ಹೊಸ ನಗರಾಭಿವೃದ್ಧಿ ಸಚಿವರು ಎರಡು ಸಾವಿರ ಕೋಟಿ ರಸ್ತೆ ಗುಂಡಿಗೆ ಕೊಟ್ಟರು. ಒಂದೇ ವರ್ಷದಲ್ಲಿ ಇಷ್ಟೊಂದು ಸಾವಿರಾರು ಕೋಟಿ ಹಣ ಘೋಷಣೆ ಮಾಡಿದ್ದಾರೆ. ಹಣ ಬಿಡುಗಡೆ ಸಹ ಮಾಡ್ತಿದ್ದೇವೆ ಎನ್ನುತ್ತಾರೆ. ಹಾಗಾದರೆ ಗುಂಡಿ ಮುಚ್ಚುತ್ತಿಲ್ಲ ಎಂದು ದೂರಿದರು.
ಶ್ವೇತಪತ್ರ ಬಿಡುಗಡೆ ಮಾಡಿ
ರಸ್ತೆ ಗುಂಡಿ ದುರಸ್ತಿಗೆ ಮೂರು ವರ್ಷದಲ್ಲಿ ಎಷ್ಟು ಹಣ ವ್ಯಯಿಸಿದ್ದೀರಿ ಎಂಬುದರ ಬಗ್ಗೆ ಮೂವತ್ತು ದಿನಗಳ ಒಳಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಸಚಿವರಿಗೆ ಆಗ್ರಹಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು. ಇದು ನಮ್ಮ ಹಣ. ತೆರಿಗೆದಾರರ ಹಣ. ತೆರಿಗೆ ಕಟ್ಟದಿದ್ದರೆ ದಂಡ ಹಾಕ್ತಾರೆ. ಹಾಗಾದರೆ ನಮ್ಮ ರಸ್ತೆ ಗೆ ಜವಾಬ್ದಾರಿ ಯಾರು ಎಂಬುದೂ ತಿಳಿಯಬೇಕು ಎಂದರು.
ಡ್ಯಾಶ್ ಬೋರ್ಡ್ ಇರಲಿ
ನಗರದಲ್ಲಿ ಬಿಡಿಎ, ಬಿಎಂಆರ್‍ಸಿಎಲ್, ಕೆಆರ್‍ಐಡಿಎಲ್ ನಲ್ಲಿ ಯಾರು ಏನು ಮಾಡ್ತಾ ಇದ್ದಾರೆ ಎಂಬುದರ ವಿವರವಾದ ದತ್ತಾಂಶ ಹೊಂದಿರುವ ಡ್ಯಾಶ್ ಬೋರ್ಡ್ ಅಗತ್ಯವಿದೆ. ಬೆಂಗಳೂರಿನ ಲೈವ್ ಡ್ಯಾಶ್ ಬೋರ್ಡ್ ಇದ್ದರೆ ಪಾಲಿಕೆಗಳು ಏನು ಕೆಲಸ ಮಾಡ್ತ ಇವೆ, ಯಾರನ್ನು ಕೇಳಬೇಕು ಎಂಬುದು ನಾಗರಿಕರಿಗೆ ತಿಳಿಯಲಿದೆ ಎಂದರು. ಎರಡು ತಿಂಗಳ ಒಳಗೆ ಈ ಡ್ಯಾಶ್‍ಬೋರ್ಡ್ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಕೇವಲ ಅಧಿಕಾರಿ ಅಮಾನತು ಮಾಡಿದರೆ ವ್ಯವಸ್ಥೆ ಬದಲಾಗಲ್ಲ. ಜನರಿಗೆ ಮಾಹಿತಿ ಬೇಕು. ರಸ್ತೆಯ ಸಮಗ್ರ ಮಾಹಿತಿ ಬೇಕು. ಡ್ಯಾಸ್‍ಬೋರ್ಡ್ ಇದ್ದರೆ ಸಚಿವರಿಗೂ ಸಹಾಯ ಆಗಲಿದೆ. ನನ್ನ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದು ನಾಗರಿಕರಿಗೆ ತಿಳಿಯಲಿದೆ ಎಂದರು. ಬಿ-ಸ್ಮೈಲ್‍ನಲ್ಲಿ ಬಿಬಿಎಂಪಿ ಎಂಜಿನಿಯರ್ ಗಳೇ ಇದ್ದಾರೆ. ಬೆಂಗಳೂರಿಗೆ ಸಾಂಸ್ಥಿಕ ಬದಲಾವಣೆ ಬೇಕಾಗಿದೆ ಎಂದು ಹೇಳಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ