Select Your Language

Notifications

webdunia
webdunia
webdunia
webdunia

ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಗೌಡ ರಾಜೀನಾಮೆ

ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್‌ಗೌಡ ರಾಜೀನಾಮೆ
ತುಮಕೂರು , ಮಂಗಳವಾರ, 28 ಸೆಪ್ಟಂಬರ್ 2021 (11:45 IST)
ತುಮಕೂರು : ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಅವರ ಬೆಂಬಲಿಗರನ್ನು ನಿಯಂತ್ರಿಸುವ ಕೆಲಸಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದು, ಅದಕ್ಕೆ ಜಿಲ್ಲೆಯಿಂದಲೇ ಆರಂಭ ಸಿಕ್ಕಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ. ಸುರೇಶ್‌ಗೌಡ ರಾಜೀನಾಮೆ ಸಲ್ಲಿಸಿದ್ದು, ಈ ಪ್ರಯತ್ನ ಇತರೆಡೆಗಳಿಗೂ ಕಾಲಿಡಲಿದೆ. ಯಡಿಯೂರಪ್ಪ ಅವರನ್ನು ಬದಲಿಸಿದ ನಂತರ ಅವರ ಬೆಂಬಲಿಗರನ್ನು ನಿಧಾನವಾಗಿ ಕೆಳಗಿಳಿಸುವ ಮೂಲಕ ಅವರ ಶಕ್ತಿಯನ್ನು ಕುಂದಿಸಿ, ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ.
ಎರಡನೇ ಬಾರಿಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಸುರೇಶ್‌ಗೌಡ, ಪಕ್ಷದಲ್ಲಿದ್ದ ಸಾಕಷ್ಟು ಆಂತರಿಕ ಗೊಂದಲಗಳನ್ನು ನಿವಾರಿಸಿಕೊಂಡು ಮುನ್ನಡೆಸಿದ್ದರು. ಶಿರಾ ವಿಧಾನಸಭೆ ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ.ಎಂ. ರಾಜೇಶ್ಗೌಡ ಅವರನ್ನು ಗೆಲುವಿನ ದಡ ಸೇರಿಸಿದ್ದರು. ಜಿಲ್ಲಾ ಪಂಚಾಯಿತಿ ಯಲ್ಲೂ ಅಧಿಕಾರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸಿದರೂ, ಕೊನೆ ಗಳಿಗೆಯಲ್ಲಿ ಕೈಕೊಟ್ಟಿತ್ತು. ಅಲ್ಪ ಸಮಯದ ಅಧಿಕಾರಕ್ಕಾಗಿ ಹೋರಾಟ ಮುಂದುವರಿಸಲಿಲ್ಲ.
ಆರ್ಎಸ್ಎಸ್, ಬಿಜೆಪಿ ಜತೆಗೆ ಗುರುತಿಸಿಕೊಂಡು ಬಂದಿದ್ದು, ಯಡಿಯೂರಪ್ಪ ಜತೆಗೆ ಆಪ್ತರಾಗಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದರು. ನಂತರ ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿ ಪಕ್ಷದಿಂದ ಹೊರ ನಡೆದರೂ ಸುರೇಶ್‌ಗೌಡ ಪಕ್ಷ ನಿಷ್ಠೆ ಮೆರೆದಿದ್ದರು. ಕೆಜೆಪಿ ಸೇರುವಂತೆ ಸಾಕಷ್ಟು ಒತ್ತಡಗಳಿದ್ದರೂ ಪಕ್ಷವನ್ನೇ ನಂಬಿ ರಾಜಕಾರಣ ಮುಂದುವರಿಸಿದ್ದರು.
ಮುಗಿಯದ ಗೋಜಲು: ಅಧ್ಯಕ್ಷರಾದ ನಂತರ ಜಿಲ್ಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಫಲಿಸಲಿಲ್ಲ. ಗುಂಪುಗಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಒಂದು ಮನೆಗೆ ಮೂರು-ನಾಲ್ಕು ಬಾಗಿಲು ಎನ್ನುವಂತಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಪಕ್ಷ ಚಟುವಟಿಕೆಗಳಿಂದ ದೂರವೇ ಇದ್ದು, ತಾವು ಕಟ್ಟಿಕೊಂಡಿರುವ ಕೋಟೆಯಿಂದ ಹೊರ ಬರುತ್ತಿಲ್ಲ. ಇನ್ನೂ ಪಕ್ಷದ ಹಿರಿಯರದ್ದು ಮತ್ತೊಂದು ದಾರಿ. ಮಾಜಿ ಸಚಿವ ಸೊಗಡು ಶಿವಣ್ಣ ಅವರದ್ದು ಇನ್ನೊಂದು ಮಾರ್ಗ. ಸಂಘ ಹಾಗೂ ಪಕ್ಷ ನಿಷ್ಠರು ಇಂತಹ ಗುಂಪುಗಾರಿಕೆಯಿಂದ ಅಂತರ ಕಾಯ್ದುಕೊಂಡಿದ್ದು, ಯಾರೂ ಯಾರ ಹಿಡಿತಕ್ಕೂ ಸಿಗದೆ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಆಂತರಿಕ ಗುಂಪುಗಾರಿಕೆ ತೀವ್ರವಾಗುತ್ತಿರುವುದನ್ನು ಮನಗಂಡು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಸರ್ಕಾರವಿದ್ದರೂ ತಾವು ಹೇಳಿದವರಿಗೆ ಅಧಿಕಾರ ಕೊಡುತ್ತಿಲ್ಲ. ಕೆಲವರಿಗಷ್ಟೇ ಅಧಿಕಾರ ಸಿಗುತ್ತಿದ್ದು, ತಾರತಮ್ಯ ಮಾಡಲಾಗುತ್ತಿದೆ. ಪಕ್ಷಕ್ಕೆ ಕರೆ ತಂದವರಿಗೆ, ಪರಿಶಿಷ್ಟರು, ಹಿಂದುಳಿದವರಿಗೆ ಅವಕಾಶಗಳು ಇಲ್ಲವಾಗಿವೆ. ಇದರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯಲಿದ್ದು, ಪಕ್ಷದ ನಾಯಕರೇ ಪರೋಕ್ಷವಾಗಿ ಕಾಂಗ್ರೆಸ್ ಜತೆಗೆ ಕೈಜೋಡಿಸಲು ಸಜ್ಜಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷರಾಗಿ ಮುಂದುವರಿಯುವುದು ಕಷ್ಟಕರವಾಗುತ್ತದೆ ಎಂದು ಅಧಿಕಾರ ತ್ಯಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಇನ್ನು ಒಂದೂವರೆ ವರ್ಷದಲ್ಲಿ ಬರಲಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ, ಮುಂದಿನ ಚುನಾವಣೆಗೆ ಸಜ್ಜಾಗಬೇಕಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಇದ್ದರೆ ಕ್ಷೇತ್ರದಲ್ಲಿ ಗಮನ ಹರಿಸುವುದು ಕಷ್ಟಕರವಾಗುತ್ತದೆ ಎಂದು ಗೌಡರು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಒಟ್ಟಾರೆ ಸುರೇಶ್ಗೌಡ ಅವರ ರಾಜೀನಾಮೆ ಹಲವು ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಅಧಿಕಾರ ವಹಿಸಿಕೊಂಡ ಒಂದು ವರ್ಷ ಮೂರು ತಿಂಗಳಲ್ಲೇ ನಿರ್ಗಮಿಸುತ್ತಿರುವ ಬಗ್ಗೆ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಗೆ ಮತ್ತೊಂದು ಬಿಗ್ ಶಾಕ್