Publish Date: Thu, 25 Apr 2024 (14:41 IST)
Updated Date: Thu, 25 Apr 2024 (14:45 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರು ಶೀಘ್ರದಲ್ಲೇ ಲೋಕಸಭೆ ಚುನಾವಣಾ ಪ್ರಚಾರ ಶುರು ಮಾಡಲಿದ್ದಾರೆಂಬ ಎಂದು ಮೂಲಗಳು ತಿಳಿಸಿವೆ.
ಕೇಜ್ರಿವಾಲ್ ಅನುಪಸ್ಥಿತಿ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರಕ್ಕೆ ಚುರುಕು ನೀಡಲು ಸುನಿತಾ ಮುಂದಾಗಿದ್ದಾರೆ. ಈ ಮೂಲಕ ತೆರೆಮರೆಯಲ್ಲೇ ದೊಡ್ಡ ಹುದ್ದೆಯತ್ತ ಸುನಿತಾ ಅಡಿ ಇಡುತ್ತಿದ್ದಾರೆ ಎನ್ನುತ್ತಿವೆ ವರದಿಗಳು.
ಮೂಲಗಳ ಪ್ರಕಾರ, ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿ ಕೊಂಡ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಅದಲ್ಲದೆ ದೆಹಲಿಯಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಉಳಿದ ಮೂರೂ ಲೋಕಸಭಾ ಕ್ಷೇತ್ರಗಳಲ್ಲೂ ಸುನಿತಾ ರೋಡ್ ಶೋ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಎಎಪಿ, ಪೂರ್ವ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ನವದೆಹಲಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.